August 27, 2026
Thursday, August 27, 2026
spot_img

ನಾನು ಪಕ್ಷದ ಶಿಸ್ತಿನ ಸಿಪಾಯಿ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದ ಲಕ್ಷ್ಮೀ ಹೆಬ್ಬಾಳ್ಕರ್

ಹೊಸದಿಗಂತ ವರದಿ ಬೆಳಗಾವಿ:

ಸಚಿವ ಸಂಪುಟದಿಂದ ಹೊರಗುಳಿದ ಬಳಿಕ ಮೊದಲ ಬಾರಿಗೆ ಸುದೀರ್ಘವಾಗಿ ಮಾತನಾಡಿದ ಮಾಜಿ ಸಚಿವೆ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಸಚಿವೆಯಾಗಿ ಮೂರು ವರ್ಷಗಳ ಕಾಲ ಅವಕಾಶ ನೀಡಿದ ಪಕ್ಷಕ್ಕೆ ಧನ್ಯವಾದ ಸಲ್ಲಿಸುವುದರೊಂದಿಗೆ, ಪಕ್ಷದ ಹೈಕಮಾಂಡ್ ನಿರ್ಧಾರವನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ.

ಮುಂದೆ ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಾಗಿ ತಿಳಿಸಿರುವ ಅವರು, “ನಾನು ಪಕ್ಷದ ಶಿಸ್ತಿನ ಸಿಪಾಯಿ. ಅವಕಾಶ ಕೊಟ್ಟರೂ, ಕೊಡದಿದ್ದರೂ ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂತ್ರಿಮಂಡಲ ರಚನೆಯಾದ ಮೊದಲ ದಿನದಿಂದ ಇಲ್ಲಿಯವರೆಗೆ ಮೂರು ವರ್ಷಗಳ ಕಾಲ ಸಚಿವೆಯಾಗಿ ಕೆಲಸ ಮಾಡಲು ನನಗೆ ಅವಕಾಶ ಮಾಡಿಕೊಟ್ಟ ಸಿದ್ದರಾಮಯ್ಯ ಅವರಿಗೆ ಮೊದಲನೆಯದಾಗಿ ಧನ್ಯವಾದ ಹೇಳುತ್ತೇನೆ. ನನ್ನ ಇಲಾಖೆಯಲ್ಲಿ ಸಾಧ್ಯವಾದಷ್ಟು ಉತ್ತಮ ಕೆಲಸ ಮಾಡುವ ಪ್ರಯತ್ನ ಮಾಡಿದ್ದೇನೆ. ಮುಂದೆ ಪಕ್ಷ ಅವಕಾಶ ಕೊಟ್ಟರೆ ಕೆಲಸ ಮಾಡುತ್ತೇನೆ. ಅವಕಾಶ ಕೊಡದೇ ಇದ್ದರೂ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇನೆ ಎಂದರು.

ನಾನು ಸಚಿವ ಸ್ಥಾನ ಕೇಳಿಲ್ಲ

ಸಚಿವ ಸ್ಥಾನ ಮುಂದುವರಿಸುವಂತೆ ತಾವು ಯಾರನ್ನೂ ಕೇಳಿಲ್ಲ ಎಂದು ಸ್ಪಷ್ಟಪಡಿಸಿದ ಹೆಬ್ಬಾಳ್ಕರ್, ರಾಜಕಾರಣದಲ್ಲಿ ಇಂತಹ ಬೆಳವಣಿಗೆಗಳು ಸಹಜ ಎಂದರು. ನನಗೆ ಸಚಿವ ಸ್ಥಾನ ನೀಡಬೇಕು ಎಂದು ನಾನು ಯಾರನ್ನೂ ಕೇಳಿಲ್ಲ. ಸಚಿವ ಸ್ಥಾನ ಸಿಗಬೇಕು ಎಂದು ಒತ್ತಾಯ ಮಾಡುವ ಪ್ರಶ್ನೆಯೇ ಇಲ್ಲ. ರಾಜಕಾರಣದಲ್ಲಿ ಇವೆಲ್ಲವೂ ಸಹಜ. ರಾಜಕಾರಣ ಅನ್ನೋದು ಯಾವಾಗ ಏನು ಬೇಕಾದರೂ ಆಗಬಹುದಾದ ಕ್ಷೇತ್ರ. ಎಲ್ಲವೂ ಅನಿಶ್ಚಿತ ಎಂದು ಹೇಳಿದರು.

ಹೈಕಮಾಂಡ್ ಸಾಕಷ್ಟು ಆಲೋಚನೆ ಮಾಡಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಅದರ ನಿರ್ಧಾರವನ್ನು ಪ್ರಶ್ನಿಸುವುದು ಸರಿಯಲ್ಲ ಎಂಬುದು ತಮ್ಮ ಅಭಿಪ್ರಾಯ. ರಾಜಕಾರಣಿಗಳ ಜೀವನದಲ್ಲಿ ಇಂತಹ ಸಂದರ್ಭಗಳು ಒಮ್ಮೆ ಬರುತ್ತವೆ. ಅಂತಹ ಸಂದರ್ಭವನ್ನು ಮೆಟ್ಟಿ ನಿಲ್ಲುವುದು ಕೂಡ ನಾಯಕತ್ವದ ಒಂದು ಗುಣ ಎಂದರು.

ಮಹಿಳೆಯರಿಲ್ಲದ ಸಂಪುಟ ಅಪೂರ್ಣ

ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಇರಬೇಕು ಎಂದು ಹೆಬ್ಬಾಳ್ಕರ್ ಪ್ರತಿಪಾದಿಸಿದರು. ಮಹಿಳೆಯರಿಲ್ಲದ ಸಂಪುಟ ಅಪೂರ್ಣ ಎನ್ನುವುದು ನನ್ನ ಅಭಿಪ್ರಾಯ. ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಇರಬೇಕು. ಮೂರು ವರ್ಷಗಳ ಕಾಲ ಸಚಿವೆಯಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಮಹಿಳೆಯರ ಸಮಸ್ಯೆಗಳನ್ನು, ಅವರ ನೋವು-ನಲಿವುಗಳನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಮಹಿಳೆಯರಿಗೆ ನ್ಯಾಯ ಸಿಗಬೇಕು, ಅವರ ಧ್ವನಿ ಸರ್ಕಾರದಲ್ಲಿ ಇರಬೇಕು ಎಂದು ಹೇಳಿದ್ದಾರೆ.

ಜಾರ್ಖಂಡ್, ಹಿಮಾಚಲ ಪ್ರದೇಶ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳ ಕಾಂಗ್ರೆಸ್ ಸರ್ಕಾರಗಳಲ್ಲಿ ಮಹಿಳೆಯರಿಗೆ ಸಚಿವ ಸ್ಥಾನ ನೀಡಲಾಗಿದೆ. ಕರ್ನಾಟಕದಲ್ಲಿ ಏನೋ ಒಂದು ರೀತಿಯ ಲೆಕ್ಕಾಚಾರದಲ್ಲಿ ಈ ಬಾರಿ ಬದಲಾವಣೆ ಆಗಿದೆ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಈ ವಿಚಾರದಲ್ಲಿ ನಾನು ಯಾವುದೇ ರೀತಿಯ ತೀಕ್ಷ್ಣ ಹೇಳಿಕೆ ನೀಡಲು ಹೋಗುವುದಿಲ್ಲ. ಮುಖ್ಯಮಂತ್ರಿಗಳು ಕೂಡ ಆದಷ್ಟು ಶೀಘ್ರದಲ್ಲಿ ಮಹಿಳೆಯರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಹೇಳಿದ್ದಾರೆ ಎಂದು ತಿಳಿಸಿದರು.

ಹೈಕಮಾಂಡ್ ನಿರ್ಧಾರವನ್ನು ಪ್ರಶ್ನಿಸುವುದು ನನ್ನ ಕೆಲಸವಲ್ಲ

ತಮ್ಮ ರಾಜಕೀಯ ಪಯಣವನ್ನು ನೆನಪಿಸಿಕೊಂಡ ಹೆಬ್ಬಾಳ್ಕರ್, ಸಾಮಾನ್ಯ ಕಾರ್ಯಕರ್ತೆಯಿಂದ ಆರಂಭಿಸಿ ಜಿಲ್ಲಾಧ್ಯಕ್ಷೆ, ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ, ಶಾಸಕಿಯಾಗಿ ಹಾಗೂ ಸಚಿವೆಯಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿರುವುದಾಗಿ ಹೇಳಿದರು.

ಪಕ್ಷದಲ್ಲಿ ಜವಾಬ್ದಾರಿ ನೀಡುವಾಗ ಪ್ರಾದೇಶಿಕತೆ, ಸಾಮಾಜಿಕ ಸಮೀಕರಣ, ಅನುಭವ, ಪಕ್ಷಕ್ಕೆ ಸಲ್ಲಿಸಿದ ಸೇವೆ ಸೇರಿದಂತೆ ಹಲವು ಮಾನದಂಡಗಳನ್ನು ನೋಡಲಾಗುತ್ತದೆ. ಯಾವ ಮಾನದಂಡದಲ್ಲಿ ಯಾರಿಗೆ ಅವಕಾಶ ಸಿಗುತ್ತದೆ ಎನ್ನುವುದು ಪಕ್ಷದ ನಿರ್ಧಾರ. ನನಗೆ ಮೂರು ವರ್ಷಗಳ ಕಾಲ ಅವಕಾಶ ಸಿಕ್ಕಿದೆ. ಆ ಮೂರು ವರ್ಷಗಳಲ್ಲಿ ನನ್ನ ಇಲಾಖೆಯಲ್ಲಿ ಬಹಳ ಒಳ್ಳೆಯ ಕೆಲಸ ಮಾಡಿದ್ದೇನೆ ಎನ್ನುವ ತೃಪ್ತಿ ನನಗಿದೆ ಎಂದರು.

ಹೈಕಮಾಂಡ್ ಈಗ ಬೇರೆಯವರಿಗೆ ಅವಕಾಶ ನೀಡಲು ನಿರ್ಧರಿಸಿದ್ದರೆ ಅದನ್ನು ಸ್ವಾಗತಿಸುವುದಾಗಿ ತಿಳಿಸಿದ ಅವರು, ನನಗೆ ಮೂರು ವರ್ಷ ಅವಕಾಶ ಕೊಟ್ಟಿದ್ದಕ್ಕೆ ನಾನು ಧನ್ಯವಾದ ಹೇಳುತ್ತೇನೆ ಎಂದರು.

ಬೆಳಗಾವಿಗೆ ಮಾತ್ರ ಸೀಮಿತವಾಗುವುದಿಲ್ಲ; ರಾಜ್ಯಾದ್ಯಂತ ಪಕ್ಷ ಸಂಘಟಿಸುತ್ತೇನೆ

ಮುಂದಿನ ದಿನಗಳಲ್ಲಿ ತಮ್ಮ ರಾಜಕೀಯ ಚಟುವಟಿಕೆಗಳು ಬೆಳಗಾವಿ ಜಿಲ್ಲೆಗೆ ಮಾತ್ರ ಸೀಮಿತವಾಗುವುದಿಲ್ಲ. ಈ ಹಿಂದೆ ಹೇಗೆ ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೋ, ಅದೇ ರೀತಿಯಲ್ಲಿ ಮುಂದೆಯೂ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷದ ಸಂಘಟನೆಯಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ:

₹5,000 ಕೋಟಿ ಆರೋಪಕ್ಕೆ ದಾಖಲೆ ತೋರಿಸಿ: ಹೆಬ್ಬಾಳಕರ್

ತಮ್ಮ ವಿರುದ್ಧ ಕೇಳಿಬಂದಿರುವ ₹5,000 ಕೋಟಿ ಆರೋಪದ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಐದು ಸಾವಿರ ಕೋಟಿ ರೂಪಾಯಿ ವಿಚಾರದಲ್ಲಿ ಹಣಕಾಸು ಇಲಾಖೆ ಹಣ ಬಿಡುಗಡೆ ಮಾಡಿಲ್ಲ ಎನ್ನುವುದನ್ನು ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ಈ ವಿಚಾರವನ್ನು ತಂದಿದ್ದೇನೆ. ನನ್ನ ವಿರುದ್ಧ ಆರೋಪ ಮಾಡುವವರು ದಾಖಲೆಗಳೊಂದಿಗೆ ಮಾತನಾಡಬೇಕು. ಸುಳ್ಳು ಆರೋಪ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !