ನಾನೊಬ್ಬ ಹೆಮ್ಮೆಯ ಹಿಂದು, ಭಾರತ-ಬ್ರಿಟನ್ ನಡುವೆ ನಾನು ಸಂಬಂಧ ಸೇತುವೆ: ರಿಷಿ ಸುನಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಜಿ-20 ಶೃಂಗಸಭೆಗಾಗಿ ಭಾರತ ಭೇಟಿ ನೀಡಿರುವ, ಬ್ರಿಟನ್ ಪ್ರಧಾನಿ ರಿಷಿ ಸುನಕ್, ‘ವಸುದೈವ ಕುಟುಂಬಕಂ’ ಎಂಬ ಪರಿಕಲ್ಪನೆ ಶ್ರೇಷ್ಠವಾದುದ್ದಾಗಿದೆ ಎಂದು ಹೇಳಿದ್ದಾರೆ.

ವಿಶ್ವವೇ ಒಂದು ಕುಟುಂಬ ಎಂದು ಹೇಳುವಾಗ ನಾನು ಅದರ ಉದಾಹರಣೆಯಾಗಿದ್ದೇನೆ. ಪ್ರಧಾನಿ ಮೋದಿ ವಿವರಿಸಿದಂತೆ ಭಾರತ ಮತ್ತು ಬ್ರಿಟನ್ ನಡುವೆ ನಾನು ಸಂಬಂಧ ಸೇತುವೆಯಾಗಿದ್ದೇನೆ.ನನ್ನಂತೆಯೇ ಸುಮಾರು 20 ಲಕ್ಷ ಮಂದಿ ಭಾರತೀಯರು ಬ್ರಿಟನ್‌ನಲ್ಲಿದ್ದಾರೆ. ಹಾಗಾಗಿ, ಬ್ರಿಟನ್ ಪ್ರಧಾನಿಯಾಗಿ ನಾನು ಇಲ್ಲಿಗೆ ಬಂದಿರುವುದು ಅತ್ಯಂತ ವಿಶೇಷವಾದುದ್ದಾಗಿದೆ. ನನ್ನ ಕುಟುಂಬ ಇಲ್ಲಿಯೇ ಇದೆ ಎಂದು ಹೇಳಿದ್ದಾರೆ.

ನಾನೊಬ್ಬ ಹೆಮ್ಮೆಯ ಹಿಂದು. ನಾನು ಹಿಂದುವಾಗಿಯೇ ಬೆಳೆದಿದ್ದೇನೆ. ಹಿಂದುವಾಗಿಯೇ ಇದ್ದೇನೆ. ನಾನು ಇಲ್ಲಿರುವ ಮುಂದಿನ ಕೆಲ ದಿನಗಳಲ್ಲಿ ಮಂದಿರಕ್ಕೆ ಭೇಟಿ ನೀಡುತ್ತೇನೆ. ಇತ್ತೀಚೆಗೆ, ನಾವು ರಕ್ಷಾಬಂಧನ ಆಚರಿಸಿದೆವು. ನನ್ನ ಸಹೋದರಿಯರು, ಸೋದರ ಸಂಬಂಧಿಗಳು ರಾಖಿ ಕಟ್ಟಿದ್ದಾರೆ. ನನ್ನಂತಹ ಒತ್ತಡದ ಬದುಕಿನಲ್ಲಿರುವವರಿಗೆ ಇಂತಹ ನಂಬಿಕೆಗಳು ಬಹಳ ಮುಖ್ಯ. ಅವು ನಮಗೆ ಒತ್ತಡದಿಂದ ಮುಕ್ತಿ ಕೊಡುತ್ತವೆ ಎಂದು ಸುನಕ್ ಹೇಳಿದರು.

ಅಷ್ಟೇ ಅಲ್ಲದೇ ಭಾರತ ಮತ್ತು ಬ್ರಿಟನ್ ನಡುವೆ ಸಮಗ್ರ ಮತ್ತು ಮಹತ್ವಾಕಾಂಕ್ಷೆಯ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ನಾನು ಮತ್ತು ಮೋದಿ ಜೀ ಉತ್ಸುಕರಾಗಿದ್ದೇವೆ ಎಂದು ಸುನಕ್ ಹೇಳಿದ್ದಾರೆ.

ಈ ವೇಳೆ ಉಕ್ರೇನ್ – ರಷ್ಯಾ ಯುದ್ಧದ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಷ್ಯಾದ ಅಕ್ರಮ ಯುದ್ಧದಿಂದಾಗಿ ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲೂ ಆಹಾರ ಪದಾರ್ಥಗಳ ಬೆಲೆಗಳ ಮೇಲೆ ವಿನಾಶಕಾರಿ ಪರಿಣಾಮ ಬೀರುತ್ತಿದೆ. ನಾವು ಉಕ್ರೇನ್‌ ಸೇರಿದಂತೆ ಅನೇಕ ಬಡ ದೇಶಗಳಿಗೆ ಧಾನ್ಯ ಸರಬರಾಜು ಮಾಡುತ್ತಿದ್ದೇವೆ. ಆಹಾರ ಪದಾರ್ಥಗಳ ಬೆಲೆಗಳು ಏರುತ್ತಿರುವುದನ್ನು ನೀವು ನೋಡಿದ್ದೀರಿ. ರಷ್ಯಾ ಇತ್ತೀಚೆಗೆ ಧಾನ್ಯ ಒಪ್ಪಂದದಿಂದ ಹೊರಬಂದಿದೆ. ಅದು ಲಕ್ಷಾಂತರ ಜನರಿಗೆ ತೊಂದರೆಯನ್ನುಂಟುಮಾಡುತ್ತಿದೆ. ರಷ್ಯಾದ ಅಕ್ರಮ ಯುದ್ಧದ ಪರಿಣಾಮದ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಖಾಲಿಸ್ತಾನ ಉಗ್ರರ ದಾಳಿ ಕುರಿತು ಪ್ರತಿಕ್ರಿಯಿಸಿದ ಅವರು, ಬ್ರಿಟನ್‌ನಲ್ಲಿ ಯಾವುದೇ ರೀತಿಯ ಉಗ್ರವಾದ ಅಥವಾ ಹಿಂಸಾಚಾರವು ಸ್ವೀಕಾರಾರ್ಹವಲ್ಲ ಎಂದು ನಾನು ನಿಸ್ಸಂದಿಗ್ಧವಾಗಿ ಹೇಳುತ್ತೇನೆ. ಅದಕ್ಕಾಗಿಯೇ ನಾವು ನಿರ್ದಿಷ್ಟವಾಗಿ ಖಾಲಿಸ್ತಾನ ಉಗ್ರವಾದವನ್ನು ಎದುರಿಸಲು ಭಾರತ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ನಮ್ಮ ರಕ್ಷಣಾ ಸಚಿವರು, ಇಲ್ಲಿನ ಸಚಿವರೊಂದಿಗೆ ಮಾತುಕತೆ ನಡೆಸಿದ್ದಾರೆ. ನಾವು ಭಾರತದ ಜೊತೆ ಗುಪ್ತಚರ ಮತ್ತು ಇತರ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ. ಅದರಿಂದ ಹಿಂಸಾತ್ಮಕ ಉಗ್ರವಾದವನ್ನು ಬೇರು ಸಮೇತ ಕಿತ್ತೊಗೆಯಲು ಸಹಾಯವಾಗುತ್ತದೆ ಎಂದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!