ನಾನು ಗುಣಮುಖವಾಗಿದ್ದೇನೆ, ಆತಂಕಪಡುವ ಅಗತ್ಯವಿಲ್ಲ: ಶಾಸಕ ಯತ್ನಾಳ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಕಲಾಪದಲ್ಲಿ ಪ್ರತಿಭಟನೆ ವೇಳೆ ರಕ್ತದೊತ್ತಡ ಹೆಚ್ಚಾಗಿ ಕುಸಿದು ಬಿದ್ದಿದ್ದ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅರೋಗ್ಯ ಸುಧಾರಿಸಿದ್ದು, ಈ ಕುರಿತು ಸ್ವತಃ ಅವರೇ ಮಾಹಿತಿ ನೀಡಿದ್ದಾರೆ.

ಈ ಕುರಿತು ಸ್ವತಃ ಟ್ವೀಟ್‌ ಮಾಡಿರುವ ಅವರು, ನಾನು ಗುಣಮುಖವಾಗಿದ್ದೇನೆ. ಆತಂಕಪಡುವ ಅಗತ್ಯವಿಲ್ಲ, ಜೈ ಶ್ರೀರಾಮ ಎಂದು ತಮ್ಮ ಅಭಿಮಾನಿಗಳಿಗೆ ಶುಭ ಸಂದೇಶವನ್ನು ರವಾನೆ ಮಾಡಿದ್ದಾರೆ.

ರ್ನಾಟಕ ವಿಧಾನಸಭಾ ಅಧಿವೇಶನದಲ್ಲಿ ಬುಧವಾರ ಬಿಜೆಪಿಯ 10 ಶಾಸಕರನ್ನು ಅಮಾನತು ಮಾಡಿದ ಬೆನ್ನಲ್ಲೇ ಪ್ರತಿಭಟನೆಗೆ ಮುಂದಾದ ವೇಳೆ ರಕ್ತದೊತ್ತಡ ಹೆಚ್ಚಾಗಿ ಕುಸಿದು ಬಿದ್ದಿದ್ದರು. ಕೂಡಲೇ ಅವರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ನಂತರ ಪೊರ್ಟೀಸ್‌ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನೆ ಮಾಡಲಾಗಿತ್ತು.

ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಅವರ ಪತ್ನಿ ಶೈಲಜ ಪಾಟೀಲ್ ಹಾಗೂ ಪುತ್ರ ರಮನಗೌಡ ಪಾಟೀಲ್ ಆಸ್ಪತ್ರೆ ದೌಡಾಯಿಸಿದ್ದಾರೆ. ಇನ್ನು ಚಿಕಿತ್ಸೆ ನೀಡಿದ ನಂತರ ಅವರ ಆರೋಗ್ಯವನ್ನು ವಿಚಾರಿಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಪೊರ್ಟೀಸ್‌ ಆಸ್ಪತ್ರೆಗ ಭೇಟಿ ಮಾಡಿದ್ದಾರೆ. ಇನ್ನು ವೈದ್ಯರು ಕೂಡ ಅವರ ಆರೋಗ್ಯ ಸುಧಾರಿಸಿದ್ದು, ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅನಾರೋಗ್ಯ ಕುರಿತು, ಚಿಕಿತ್ಸೆ ನೀಡಿದ ಪೋರ್ಟೀಸ್‌ ಆಸ್ಪತ್ರೆ ವೈದ್ಯ ಡಾ.ಅಬ್ದುಲ್ ಖಾದರ್ ಮಾತನಾಡಿ, ಸ್ವೆಟ್ಟಿಂಗ್ ಮತ್ತು ಗಿಡ್ಡಿನೆಸ್ ಅಂತ ಬಂದು ಅಡ್ಮಿಟ್ ಆಗಿದ್ದಾರೆ. ನಾರ್ಮಲ್ ಇದ್ದಾರೆ, ಸ್ವಲ್ಪ ರಕ್ತದೊತ್ತಡ (ಬಿಪಿ) ಹೆಚ್ಚಾಗಿದೆ. ಇನ್ನು ಅವರ ಎಕೋ ಮತ್ತು ಇಸಿಜಿ ಕೂಡ ನಾರ್ಮಲ್ ಇದೆ. ಅರಾಮಾಗಿ ಮಾತಾಡ್ತಾ ಇದ್ದಾರೆ. ಇನ್ನು ಅನಾರೋಗ್ಯ ಎಂದು ಬಂದಿರುವ ಹಿನ್ನೆಲೆಯಲ್ಲಿ ಅವರನ್ನು 24 ಗಂಟೆ ತಪಾಸಣೆಯಲ್ಲಿ ಇಡಲಾಗುವುದು. ನಂತರ, ಸಂಪೂರ್ಣ ಚೇತರಿಸಿಕೊಂಡ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗುವುದು ಎಂದು ತಿಳಿಸಿದರು.

ಇನ್ನು ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರು ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ಅಲ್ಲಿಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಅವರ, ಆರೋಗ್ಯ ಸ್ಥಿರವಾಗಿದೆ. ಈಗಷ್ಟೆ ಅವರನ್ನ ಮಾತಾಡಿಸಿಕೊಂಡು ಬಂದಿದ್ದೇವೆ. ಇವತ್ತು ನಡೆಯಬಾರದ ಘಟನೆ ನಡೆದುಹೋಗಿದೆ. ಆ ನೂಕಾಟ ತಳ್ಳಾಟದಲ್ಲಿ ಅವರ ಬಿಪಿ ಜಾಸ್ತಿ ಆಗಿ ಆರೋಗ್ಯದಲ್ಲಿ ಏರುಪೇರಾಗಿದೆ. ಈಗ ಸ್ಥಿರವಾಗಿದ್ದಾರೆ. ಚೇತರಿಕೆ ಕಂಡು ಶೀಘ್ರವಾಗಿ ಎಂದಿನಂತೆ ಕಾರ್ಯಪ್ರವೃತ್ತರಾಗಲಿದ್ದಾರೆ ಎಂದು ಹೇಳಿದರು.

ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಆಸ್ಪತ್ರೆಗೆ ದಾಖಲಿಸುವ ವೇಳೆ ಅವರೊಂದಿಗೆ ಆಸ್ಪತ್ರೆಗೆ ಹೋದ ಶಾಸಕ ಅರವಿಂದ್‌ ಬೆಲ್ಲದ್‌ ಮಾತನಾಡಿ, ಶಾಸಕ‌ ಬಸವನಗೌಡ ಯತ್ನಾಳ್ ಆರೋಗ್ಯದಲ್ಲಿ ಸ್ಥಿರವಾಗಿದೆ. ಫೋರ್ಟಿಸ್ ಆಸ್ಪತ್ರೆಯ ಹಿರಿಯ ವೈದ್ಯರಿಂದ ಯತ್ನಾಳ್ ಆರೋಗ್ಯ ತಪಾಸಣೆ ಮಾಡಲಾಗಿದೆ. ಆರೋಗ್ಯದಲ್ಲಿ ಯಾವುದೇ ಸಮಸ್ಯ ಇಲ್ಲ, ಸ್ವಲ್ಪ ಬಿಪಿ ಹೆಚ್ಚಳ ಆಗಿದೆ ಅಷ್ಟೇ ಎಂದು ಮಾಹಿತಿ ನೀಡಿದ್ದಾರೆ. ಮಾರ್ಷಲ್ ಗಳ ತಳ್ಳಾಟ ನೂಕಾಟದಲ್ಲಿ ದೈಹಿಕ ಒತ್ತಡ ಬಿದ್ದಿದೆ. ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ಅಂತ ವೈದ್ಯರು ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!