ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದಿಂದಲೇ ಇಡೀ ಭಾರತವನ್ನು ಬ್ಲಾಸ್ಟ್ ಮಾಡುತ್ತೇನೆಂಬ ಗೋಡೆ ಬರಹವೊಂದು ಕೊಡಿಗೇಹಳ್ಳಿಯ ಅಲ್ಫೈನ್ ಪಿರಮಿಡ್ ಅಪಾರ್ಟ್ಮೆಂಟ್‌ನ ಗೋಡೆ ಮೇಲೆ ಬುಧವಾರ ಕಂಡು ಬಂದಿದ್ದು, ಈ ಬೆಳವಣಿಗೆ ಸ್ಥಳೀಯ ನಿವಾಸಿಗಳನ್ನು ಆತಂಕಗೊಳ್ಳುವಂತೆ ಮಾಡಿತ್ತು.
ಸುಮಾರು 200 ರಿಂದ 300 ಮನೆಗಳನ್ನೊಳಗೊಂಡಿರುವ ಈ ಅಪಾರ್ಟ್ಮೆಂಟ್‌ನಲ್ಲಿ, ಗೋಡೆಯ ಮೇಲಿನ ಬರಹದಲ್ಲಿ ‘I am going to blast India from Pakistan’ (ಪಾಕಿಸ್ತಾನದಿಂದಲೇ ಇಡೀ ಭಾರತವನ್ನು ಬ್ಲಾಸ್ಟ್ ಮಾಡುತ್ತೇನೆ) ಎಂದು ಬರೆದು ಬೆದರಿಕೆ ಹಾಕಿರುವುದು ಕಂಡು ಬಂದಿದೆ.
ಈ ಗೋಡೆ ಬರಹ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಹುಟ್ಟುವಂತೆ ಮಾಡಿತ್ತು. ಬಳಿಕ ನಿವಾಸಿಗಳು ತಕ್ಷಣವೇ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಬಾಂಬ್ ಸ್ಕ್ವಾಡ್ ಮತ್ತು ಡಾಗ್ ಸ್ಕ್ವಾಡ್ ತಂಡಗಳ ಸಹಾಯದಿಂದ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ.
ಬಳಿಕ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಿದಾಗ, ಅಪಾರ್ಟ್ಮೆಂಟ್ನಲ್ಲಿ ವಾಸಿಸುವ ಮಗುವೊಂದು ಸಂದೇಶವನ್ನು ಬರೆದಿರುವುದು ಪತ್ತೆಯಾಗಿದೆ. ಈ ಸಂಬಂಧ ಇನ್ನೂ ಪ್ರಕರಣ ದಾಖಲಾಗಿಲ್ಲ.