ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಬ್‌ಜೀ ಪ್ರೇಮಿಗಾಗಿ4 ಮಕ್ಕಳೊಂದಿಗೆ ಭಾರತಕ್ಕೆ ಅಕ್ರಮ ಪ್ರವೇಶ ಮಾಡಿದ್ದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಪ್ರಕರಣ ದಿನಕ್ಕೊಂದು ರೂಪ ಪಡೆಯುತ್ತಿದೆ.
ಯುಪಿ ಪೊಲೀಸರು ಪಾಕಿಸ್ತಾನದ ಸೇನೆ ಮತ್ತು ಅಲ್ಲಿನ ಗುಪ್ತಚರ ಸಂಸ್ಥೆ ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್‌ನೊಂದಿಗೆ (ISI) ಆಕೆ ಸಂಬಂಧ ಹೊಂದಿರುವ ಶಂಕೆ ಹಿನ್ನೆಲೆ ವಿಚಾರಣೆ ನಡೆಸುತ್ತಿದ್ದು,ಈ ನಡುವೆ ನಾನು ಗೂಢಚಾರಿಯಲ್ಲ, ನನ್ನನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಅವರಿಗೆ ಮನವಿ ಮಾಡಿಕೊಂಡಿದ್ದಾಳೆ.
ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸೀಮಾ (Seema Haider), ನಾನು ಭಾರತಕ್ಕೆ ಹೋಗುತ್ತಿದ್ದೇನೆ ಅನ್ನೋದು ಪಾಕಿಸ್ತಾನದಲ್ಲಿ ಯಾರಿಗಾದರೂ ತಿಳಿದಿದ್ದರೆ ಅಲ್ಲಿಯೇ ನನ್ನನ್ನ ಕೊಂದುಬಿಡುತ್ತಿದ್ದರು. ನಾನು ಗೂಢಚಾರಿಯಲ್ಲ. ಶೀಘ್ರವೇ ಸತ್ಯವೇನೆಂಬುದು ಹೊರಬರಲಿದೆ. ನನ್ನನ್ನ ವಾಪಸ್ ಕಳುಹಿಸದಂತೆ ನಾನು ಮೋದಿ ಜೀ, ಯೋಗಿ ಜೀ ಅವರಲ್ಲಿ ವಿನಂತಿಸುತ್ತೇನೆ ಎಂದು ಹೇಳಿದ್ದಾಳೆ.
6 ಗಂಟೆಗಳ ಕಾಲ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದಿಂದ ವಿಚಾರಣೆಗೆ ಒಳಗಾಗಿದ್ದ ಸೀಮಾ, ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ನನಗೆ ಬೇರೆ ಆಯ್ಕೆಗಳು ಇರಲಿಲ್ಲ. ಆದ್ದರಿಂದ ಭಾರತಕ್ಕೆ ಅಕ್ರಮವಾಗಿಯೇ ಪ್ರವೇಶಿಸಬೇಕಾಯ್ತು. ನನಗೆ ಪಾಕಿಸ್ತಾನದಲ್ಲಿ ವಾಸಿಸಲು ಇಷ್ಟವಿರಲಿಲ್ಲ. ನಾನು ಹಿಂದಿನ ನನ್ನ ಯಾವುದೇ ಮಾಹಿತಿಯನ್ನೂ ಮರೆಮಾಚಿಲ್ಲ ಎಂದು ಸೀಮಾ ವಿಚಾರಣೆಯಲ್ಲಿ ತಿಳಿಸಿದ್ದಾಳೆ.