September 5, 2026
Saturday, September 5, 2026
spot_img

ನಾನು ನಾಡಿನ ದೊರೆಯಲ್ಲ, ನನ್ನನ್ನು ‘ಪ್ರಜಾ ಸೇವಕ’ ಎಂದೇ ಕರೆಯಿರಿ; ಸಿಎಂ ಡಿಕೆಶಿ

ಹೊಸದಿಗಂತ ವರದಿ ವಿಜಯನಗರ:

ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಬಹುತೇಕ ಮುಖ್ಯಮಂತ್ರಿ, ನಾಡಿನ ದೊರೆ ಎಂದು ಸಂಭೊದಿಸಲಾಗುತ್ತದೆ. ಆದರೆ, ನಾವು ರಾಜರಲ್ಲ.‌ ಜನರಿಂದ ಆಯ್ಕೆಯಾದ ಪ್ರಜಾ ಸೇವಕ. ಹಾಗಾಗಿ ನನ್ನನ್ನು ಪ್ರಜಾ ಸೇವಕ‌ ಎಂದು ಕರೆಯುವಂತೆ ಮುಖ್ಯಮಂತ್ರಿ‌ ಡಿ.ಕೆ ಶಿವಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಕೂಡ್ಲಿಗಿಯಲ್ಲಿ ಪ್ರಜಾಸೇವಾ ಇಲಾಖೆಯ ಪ್ರಜಾ ಸೇವೆ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜನ ಕಾಲ ಮುಗಿದು, ಈಗ ಪ್ರಜಾಪ್ರಭುತ್ವ ಬಂದಿದೆ. ನನ್ನನ್ನು ‘ನಾಡಿನ ದೊರೆ’ಎಂದು ಕರೆಯುವ ಬದಲು ‘ಪ್ರಜಾಸೇವಕ’ ಎಂದು ಕರೆದರೆ, ನನಗೆ ಅತ್ಯಂತ ಸಂತೋಷವಾಗುತ್ತದೆ. ಎಂದು  ಪ್ರತಿಪಾದಿಸಿದರು.

​ಜನಸೇವೆಯೇ ಜನಾರ್ಧನ ಸೇವೆ ಎಂಬುದನ್ನು ನಾವು ನಂಬಿದ್ದೇವೆ. ರಾಜ್ಯದ ಜನತೆ 136 ಶಾಸಕರನ್ನು ಗೆಲ್ಲಿಸಿ, ಇಡೀ ದೇಶಕ್ಕೇ ಮಾದರಿಯಾಗುವಂತಹ ಹೊಸ ದಾರಿಯಲ್ಲಿ ಸಾಗಲು ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳು ಹಾಗೂ ಅಧಿಕಾರಿಗಳ ಬಳಿ ಅಲೆಯುವ ಕಾಲ ಈಗ ಮುಗಿದಿದೆ. ಸರ್ಕಾರದ ಆಡಳಿತವೇ ನೇರವಾಗಿ ಜನರ ಮನೆಬಾಗಿಲಿಗೆ ತಲುಪಬೇಕು ಎನ್ನುವ ಪವಿತ್ರ ಉದ್ದೇಶದಿಂದ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಅವರು ವಿವರಿಸಿದರು.

ಇದನ್ನೂ ಓದಿ:

​ವಿಧಾನಸೌಧ, ಡಿಸಿ ಕಚೇರಿ ಅಥವಾ ತಾಲೂಕು ಕಚೇರಿಗಳಲ್ಲಿ ಕುಳಿತು ಜನರಿಂದ ದೂರವಿದ್ದು ಆಡಳಿತ ನಡೆಸುವುದು ಸರಿಯಲ್ಲ. ಪ್ರತಿಯೊಬ್ಬ ನಾಗರಿಕನಿಗೂ ಸಚಿವರು, ಶಾಸಕರು ಅಥವಾ ಅಧಿಕಾರಿಗಳನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಜನರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲೇ ನೇರ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಜಾಸೇವಾ ಇಲಾಖೆ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

​ಇದು ಕೇವಲ ಒಂದು ಸರ್ಕಾರಿ ಇಲಾಖೆಯಾಗದೆ, ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರುವ ಜನಪರ ವ್ಯವಸ್ಥೆಯಾಗಿ ಹೊರಹೊಮ್ಮಲಿದೆ ಎಂದು ಆಶಯ ವ್ಯಕ್ತಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !