ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಬದಲಾವಣೆ ಕುರಿತು ಕಾಂಗ್ರೆಸ್ ಒಳಗಡೆ ನಡೆಯುತ್ತಿರುವ ಚರ್ಚೆಗಳ ನಡುವೆಯೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. ಕೊಪ್ಪಳ ಜಿಲ್ಲೆಯ ಹಿರೇವಂಕಲಕುಂಟ ಗ್ರಾಮದಲ್ಲಿ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಿದ ಮಧು ಬಂಗಾರಪ್ಪ, “ಸಿಎಂ ಬದಲಾವಣೆ ಕುರಿತಾಗಿ ನಮಗೆಲ್ಲ ಬಾಯಿ ಮುಚ್ಚಿಕೊಂಡು ಇರಲು ಸೂಚಿಸಲಾಗಿದೆ. ನೀವು ಮಾಧ್ಯಮದಲ್ಲಿ ಏನು ಚರ್ಚೆ ಮಾಡುತ್ತಿದ್ದೀರೋ ನನಗೆ ಯಾವುದೇ ಸಂಬಂಧವಿಲ್ಲ,” ಎಂದು ಇತ್ತಿಚೆಗೆ ನಡೆದ ರಾಜಕೀಯ ಗೊಂದಲದ ಮೇಲೆ ಸ್ಪಷ್ಟನೆ ನೀಡಿದ್ದಾರೆ.
ನಾನು ಬಾಯಿ ತೆರೆಯುವವನು ಅಲ್ಲ. ಬಾಯಿ ತೆರೆದು ನನಗೆ ಏನು ಪ್ರಯೋಜನ? ಈ ವಿಚಾರದಲ್ಲಿ ಗಪ್‌ಚುಪ್ ಆಗಿಯೇ ಇರುತ್ತೇನೆ,” ಎನ್ನುವ ಮೂಲಕ ಸಿಎಂ ಬದಲಾವಣೆಯ ಜಟಿಲ ವಿಷಯದಲ್ಲಿ ತಮಗೆ ಮೂಗು ತುರಿಸುವ ಇಚ್ಛೆಯಿಲ್ಲವೆಂಬುದನ್ನು ಸ್ಪಷ್ಟಪಡಿಸಿದರು. ಕಾಂಗ್ರೆಸ್ ನಾಯಕ ಸುರ್ಜೆವಾಲಾ ಅವರು ನಡೆಸಿದ ಶಾಸಕರ ಸಭೆಯ ಕುರಿತು ಪ್ರತಿಕ್ರಿಯಿಸಿ, “ಅವರು ನಮ್ಮ ಹಿರಿಯ ನಾಯಕರು. ಅವರು ಬಂದು ಸಭೆ ನಡೆಸುತ್ತಾರೆ. ಅದರಿಂದ ನಿಮಗೆ ಏನು?” ಎಂದು ಮಾಧ್ಯಮದ ಪ್ರಶ್ನೆಗೆ ಪ್ರಶ್ನೆಯನ್ನೇ ಹಾಕಿದರು.
ಬಿಜೆಪಿಯ ಹಿಂದುತ್ವ ನಿಲುವು ಕುರಿತು ಗಂಭೀರ ವ್ಯಂಗ್ಯವಾಡಿದ ಮಧು ಬಂಗಾರಪ್ಪ, “ಅವರು ಹಿಂದುತ್ವ, ಹಿಂದುತ್ವ ಅಂತಾ ಮಾತನಾಡುತ್ತಾರೆ. ಅವರಿಗೆ ಗೊತ್ತಾ ಹಿಂದುತ್ವ ಬದನೆಕಾಯಿ!” ಎಂದು ಹರಿಹಾಯ್ದರು. ದೇವಾಲಯ ಅಭಿವೃದ್ಧಿ ಅವರಿಗೆ ಸಾಧ್ಯವಿಲ್ಲ. ಆದರೆ ನಾವು ಎಲ್ಲ ಜಾತಿ-ಧರ್ಮ ನೋಡದೇ ದೇವಸ್ಥಾನಗಳಿಗೆ ಹಣ ನೀಡಿದ್ದೇವೆ. ಉದಾಹರಣೆಗೆ ಅಜೀಂ ಪ್ರೇಮ್‌ಜಿಯವರಂತಹ ಪುಣ್ಯಾತ್ಮರು ನಮ್ಮ ರಾಜ್ಯದಲ್ಲಿ ಇದ್ದಾರೆ ಎಂಬುದೇ ನಮಗೆ ಪುಣ್ಯ, ಎಂದರು.
ದೇವಾಲಯಗಳಿಗೆ ಹಣ ನೀಡುವ ಬಗ್ಗೆ ಸಾರ್ವಜನಿಕರ ಮನವಿಗೆ ಉತ್ತರ ನೀಡಿದ ಮಧು ಬಂಗಾರಪ್ಪ, “ನನ್ನ ಕ್ಷೇತ್ರದ ಜನರು ದೇವಸ್ಥಾನಕ್ಕೆ ಹಣ ಕೇಳುತ್ತಾರೆ. ಆದರೆ ನಾನು ಯಾವ ದೇವಸ್ಥಾನಕ್ಕೂ ಹಣ ನೀಡುವುದಿಲ್ಲ. ದೇವಾಲಯದ ಗಂಟೆ ಹೊಡೆದರೆ ಏನಾಗುತ್ತೋ ಗೊತ್ತಿಲ್ಲ, ಆದರೆ ಶಾಲೆಯ ಗಂಟೆ ಹೊಡೆಯಬೇಕು,” ಎಂದು ತಮ್ಮ ಶಿಕ್ಷಣ ಪ್ರೀತಿಯನ್ನು ತೋರ್ಪಡಿಸಿದರು.