ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ‘ ಸಿನಿಮಾ ಕನ್ನಡದಲ್ಲಿ ಇಂದು ತೆರೆಕಂಡ ಸಿನಿಮಾ.ಮೊದಲ ದಿನ ನಿರೀಕ್ಷೆಯಂತೆಯೇ ಪ್ರೇಕ್ಷಕರ ಮನಗೆದ್ದಿದೆ. ಈ ಮೂಲಕ ಹೊಸಬರ ಸಿನಿಮಾಕ್ಕೆ ಪ್ರೇಕ್ಷಕರು ಬರುವುದಿಲ್ಲ ಎಂಬ ಮಾತನ್ನು ಸಿನಿಮಾ ಸುಳ್ಳಲಾಗಿಸಿದೆ.
ಸ್ಟಾರ್ ನಟರ ಸಿನಿಮಾಗಳ ಮಾದರಿಯಲ್ಲಿಯೇ ಉತ್ತಮ ಓಪನಿಂಗ್ ಪಡೆದುಕೊಂಡಿದೆ. ಇದೇ ಖುಷಿಯಲ್ಲಿ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ (Raj B Shetty), ‘ಹಾಸ್ಟೆಲ್ ಹುಡುಗರು’ ತಂಡಕ್ಕೆ ಪ್ರೀತಿಯ ಪತ್ರವೊಂದನ್ನು ಬರೆದಿದ್ದಾರೆ.
‘ಪ್ರೀತಿಯ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ತಂಡಕ್ಕೆ, ಕನ್ನಡ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಕನ್ನಡ ಪ್ರೇಕ್ಷಕರ ಕೊರತೆಯಿದೆ ಎಂಬ ಹತಾಶೆಯನ್ನು ಸತ್ಯವೆಂದು ನಂಬಿ ಕುಳಿತಿದ್ದೆವು ನಾವು. ಮೊದಲ ಬಾರಿಗೆ ನಮ್ಮ ನಂಬಿಕೆ ಸುಳ್ಳಾಗಿದ್ದಕ್ಕೆ ಅಪಾರ ಸಂತೋಷವಿದೆ. ಅದನ್ನು ಕೆಡವಿದ ನಿಮ್ಮ ತಂಡಕ್ಕೆ ನಮ್ಮ ಪ್ರಣಾಮಗಳು. ಚಿತ್ರಮಂದಿರದಲ್ಲಿ ಪ್ರೇಕ್ಷಕರು ನುಗ್ಗಬೇಕಾದಲ್ಲಿ ನೂರಾರು ಕೋಟಿ ಬಜೆಟ್‌ನ ಅಗತ್ಯವಿದೆ, ಸ್ಟಾರ್ ನಟರ, ನಿರ್ದೇಶಕರ ಅನಿವಾರ್ಯತೆಯಿದೆ ಎಂಬೆಲ್ಲ ಸುಳ್ಳುಗಳನ್ನು ಸಮರ್ಥವಾಗಿ ನಿವಾಳಿಸಿ ಎಸೆದದ್ದಕ್ಕೆ ಧನ್ಯವಾದಗಳು”.
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’, ಇದು ಹುಚ್ಚು ಮನಸ್ಸಿನ ಅಭಿವ್ಯಕ್ತಿ. ಹತ್ತಾರು ಹುಡುಗರು ಗಂಭೀರವಾಗಿ ಮಾಡಿದ ತಮಾಷೆಯ ಸಿನಿಮಾ. ಜೊತೆಗೆ ಈ ಸಿನೆಮಾ ಮುಂದೆ ಬರುವ ಇನ್ನಷ್ಟು ಹುಚ್ಚು ಹುಡುಗರಿಗೆ ಧೈರ್ಯ. ಇಂಥ ಸಿನಿಮಾಗಳು ಗೆದ್ದಾಗ ಮಾತ್ರ ಚಿತ್ರೋದ್ಯಮಕ್ಕೆ ನಿಜವಾದ ಲಾಭ. ಕನಸುಗಳಿಗೆ ಬಂಡವಾಳದ ಭಯವಿರಬಾರದು, ಕನಸುಗಳಿಗೆ ಸಿದ್ದ ಸೂತ್ರಗಳ ಹೊರೆಯಿರಬಾರದು, ಕನಸುಗಳಿಗೆ ವ್ಯಾಪಾರದ ಹಂಗಿರಬಾರದು. ಕನಸುಗಳಿಗೆ ಪ್ರಾಮಾಣಿಕತೆ, ಹಸಿವು, ಧೈರ್ಯ, ಅಪಾರ ಹುಚ್ಚು, ಒಂದಷ್ಟು Practicality ಇಷ್ಟು ಜೊತೆಗಿದ್ದರೆ “ನೀವೂ” ಒಂದು ಸಿನಿಮಾ ಮಾಡಬಹುದು. ಇದನ್ನು ನಿರೂಪಿಸಿ ಗೆದ್ದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ತಂಡಕ್ಕೆ ಜಯವಾಗಲಿ” ಎಂದು ಪ್ರೀತಿಯಿಂದ ರಾಜ್ ಬಿ ಶೆಟ್ಟಿ ಶುಭ ಕೋರಿದ್ದಾರೆ.
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾವನ್ನು ಬಹುತೇಕ ಹೊಸಬರೇ ಸೇರಿ ಮಾಡಿದ್ದಾರೆ. ಒಂದು ಹಾಸ್ಟೆಲ್ಲ್ಲಿ ಒಂದು ರಾತ್ರಿಯಲ್ಲಿ ನಡೆಯುವ ಘಟನೆಗಳನ್ನೇ ಆಧರಿಸಿ ಮಾಡಿದ ಹಾಸ್ಯಮಿಶ್ರಿತ ಥ್ರಿಲ್ಲರ್ ಸಿನಿಮಾ ಇದು. ನಾಯಕ-ನಾಯಕಿ ಸಿದ್ಧಸೂತ್ರಕ್ಕೆ ಜೋತು ಬೀಳದೆ ಕತೆ, ಕತೆಯಲ್ಲಿನ ಘಟನಾವಳಿಗಷ್ಟೆ ಒತ್ತು ಕೊಟ್ಟು ಭಿನ್ನ ರೀತಿಯಲ್ಲಿ ನಿರ್ದೇಶನವನ್ನು ನಿತಿನ್ ಮಾಡಿದ್ದಾರೆ.