ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ವಿರುದ್ಧ ಕೇಳಿ ಬಂದ ಆರೋಪಗಳಿಗೆ ನಟಿ ರಚಿತಾ ರಾಮ್ ಮೌನ ಮುರಿದಿದ್ದು ಸಂಜು ವೆಡ್ಸ್ ಗೀತಾ 2 ನಿರ್ದೇಶಕ ರಾಜಶೇಖರ್ ಅವರದ್ದೇ ತಪ್ಪು ಎಂದು ಕಿಡಿಕಾರಿದ್ದಾರೆ.
ಕಳೆದ ಮೂರು ದಿನಗಳಿಂದ ಬರುತ್ತಿರುವ ಆರೋಪಗಳಿಗೆ ರಚಿತಾ ರಾಮ್ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
“ನಾಗಶೇಖರ್ ಈಗ ನನ್ನ ವಿರುದ್ಧ ಮಾಡುತ್ತಿರುವ ಎಲ್ಲಾ ಆರೋಪಗಳು ಸುಳ್ಳು. ಜನವರಿ 17 ರಂದು ಸಂಜು ವೆಡ್ಸ್ ಗೀತಾ 2 ಮೊದಲ ಬಾರಿ ಬಿಡುಗಡೆಯಾಗಿತ್ತು. ಮೊದಲ ಬಾರಿ ಸಿನಿಮಾ ಬಿಡುಗಡೆಯಾದಾಗ ನಾನು ಎಲ್ಲಾ ಪ್ರಚಾರಕ್ಕೆ ಹೋಗಿದ್ದೇನೆ. ಈಗ ಯಾಕೆ ನನ್ನ ಅನುಪಸ್ಥಿತಿಯಲ್ಲಿ ಆ ರೀತಿ ಮಾತಾನಾಡುತ್ತಿದ್ದಾರೋ ಗೊತ್ತಿಲ್ಲ. ಈಗ ನಾನು ಬೇರೊಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದು ಅವರಿಗೆ ಡೇಟ್ ನೀಡಿದ್ದೇನೆ. ಈ ಸಂದರ್ಭದಲ್ಲಿ ಎರಡನೇ ಬಾರಿ ಸಿನಿಮಾ ರಿಲೀಸ್ ಆಗುತ್ತಿದ್ದು ಈಗ ಪ್ರಚಾರಕ್ಕೆ ಬರಬೇಕು ಎಂದು ಹೇಳಿದರೆ ಹೇಗೆ? ಇದೇ ಸಂಜು ವೆಡ್ಸ್ ಗೀತಾ ತಂಡ ಶೂಟಿಂಗ್ ಕಾರಣವೊಡ್ಡಿ ಬೇರೊಂದು ಸಿನಿಮಾ ಪ್ರಚಾರಕ್ಕೆ ಅವಕಾಶ ಮಾಡಿಕೊಡಲಿಲ್ಲ. ಆ ಸಿನಿಮಾವನ್ನು ಮಹಿಳಾ ನಿರ್ಮಾಪಕಿ ನಿರ್ಮಾಣ ಮಾಡಿದ್ದರು. ಅವರು ದುಡ್ಡು ಹಾಕಿರ್ಲಿಲ್ವಾ? ಅವಾಗ ಆ ನಿರ್ಮಾಪಕರಿಗೆ ಕಷ್ಟ ಆಗಿಲ್ವಾ?” ಎಂದು ಕಿಡಿಕಾರಿದ್ದಾರೆ.