ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾನು ಆರ್‌ಎಸ್‌ಎಸ್ ನಿಷೇಧಿಸಬೇಕು ಎಂದು ಹೇಳಿಲ್ಲ, ಸರ್ಕಾರಿ ಶಾಲೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆ ನಿಷೇಧಿಸುವಂತೆ ಮಾತ್ರ ಹೇಳಿದ್ದೇನೆ ಎಂದು ಐಟಿ ಬಿಟಿ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆರ್‌ಎಸ್‌ಎಸ್ ಪ್ರೇರಿತ ಘರ್ಷಣೆಗಳ ಬಲಿಪಶುಗಳು ಹೆಚ್ಚಾಗಿ ಬಡ ಮತ್ತು ಹಿಂದುಳಿದ ವರ್ಗದ ಯುವಕರು, ಬಿಜೆಪಿ ನಾಯಕರ ಮಕ್ಕಳಲ್ಲ ಎಂದು ತಿಳಿಸಿದ್ದಾರೆ. ಆರ್‌ಎಸ್‌ಎಸ್ ಅನುಭವಿಸುತ್ತಿರುವ ಸವಲತ್ತುಗಳನ್ನು ಪ್ರಶ್ನಿಸಿದ ಅವರು, ಇತರ ಸಂಘಟನೆಗಳು ಕೋಲುಗಳನ್ನು ಹಿಡಿದು ಮೆರವಣಿಗೆಗಳನ್ನು ನಡೆಸಿದರೆ, ಅವರಿಗೆ ಅವಕಾಶ ನೀಡಲಾಗುತ್ತದೆಯೇ? ಆರ್‌ಎಸ್‌ಎಸ್ ಅನ್ನು ಏಕೆ ವಿಭಿನ್ನವಾಗಿ ಪರಿಗಣಿಸಬೇಕು?. ಈ ವಿಶೇಷ ಸವಲತ್ತು ಅವರಿಗೆ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ತಮ್ಮ ತಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ೨೦೦೨ರಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿ ಗೃಹ ಸಚಿವರಾಗಿದ್ದಾಗ ಶಿವಾಜಿನಗರದಲ್ಲಿ ಸಮಸ್ಯೆ ಸೃಷ್ಟಿಸದಂತೆ ಎಚ್ಚರಿಸಲು ತೆರಳಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ.