ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆಗೆ ಮೈತ್ರಿ ಒಕ್ಕೂಟ ಪರಸ್ಪರ ಸಹಕಾರದೊಂದಿಗೆ ಸೀಟು ಹಂಚಿಕೆ ಸೇರಿ ಹಲವು ರೀತಿಯಲ್ಲಿ ರಣತಂತ್ರ ರೂಪಿಸುತ್ತಿವೆ. ಇದರ ಬೆನ್ನಲ್ಲೇ, I.N.D.I.A ಒಕ್ಕೂಟ ಸೇರ್ಪಡೆಯಾಗುವ ಕುರಿತು ನಟ, ಮಕ್ಕಳ್ ನೀಧಿ ಮೈಯಮ್ (MNM) ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ (Kamal Haasan) ಅವರು ಮಹತ್ವದ ಸ್ಪಷ್ಟನೆ ನೀಡಿದ್ದಾರೆ.
ನಾನು I.N.D.I.A ಒಕ್ಕೂಟವನ್ನು ಸೇರಿಲ್ಲ ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಎಂಎನ್‌ಎಂ ಪಕ್ಷ ಸ್ಥಾಪನೆಯಾಗಿ 7 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಬಳಿಕ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. “ನಾನು I.N.D.I.A ಒಕ್ಕೂಟವನ್ನು ಸೇರ್ಪಡೆಯಾಗುತ್ತಿಲ್ಲ. ಯಾರು ರಾಷ್ಟ್ರದ ಹಿತದೃಷ್ಟಿಯಿಂದ ನಿಸ್ವಾರ್ಥವಾಗಿ ಕೆಲಸ ಮಾಡುತ್ತಿದ್ದಾರೋ, ಅವರ ಪರವಾಗಿ ನಾವು ನಿಲ್ಲುತ್ತೇವೆ. ಸ್ಥಳೀಯ ರಾಜಕಾರಣ, ಊಳಿಗಮಾನ್ಯ ಪದ್ಧತಿ ಅಸ್ತಿತ್ವದಲ್ಲಿರುವ ಸ್ಥಳೀಯ ಪಕ್ಷಗಳ ಜತೆ ನಾವು ಸೇರುವುದಿಲ್ಲ. ದೇಶದ ಹಿತದೃಷ್ಟಿಯಿಂದ ಕೆಲಸ ಮಾಡುವವರ ಪರವಾಗಿ ನಾವು ನಿಲ್ಲುತ್ತೇವೆ” ಎಂದು ಹೇಳಿದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಂಎನ್‌ಎಂ ಪಕ್ಷವು I.N.D.I.A ಒಕ್ಕೂಟವನ್ನು ಸೇರುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮೊದಲ ಹಂತದಲ್ಲಿ ಕೈಗೊಂಡಿದ್ದ ಭಾರತ್ ಜೋಡೋ ಯಾತ್ರೆಯಲ್ಲಿ ಕಮಲ್ ಹಾಸನ್ ಪಾಲ್ಗೊಂಡಿದ್ದರು. ಹಾಗಾಗಿ, ಅವರು ಇಂಡಿಯಾ ಒಕ್ಕೂಟವನ್ನು ಸೇರಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದರ ಬೆನ್ನಲ್ಲೇ, ನಾನು I.N.D.I.A ಒಕ್ಕೂಟವನ್ನು ಸೇರ್ಪಡೆಯಾಗಿಲ್ಲ ಎಂದು ಕಮಲ್ ಹಾಸನ್ ಹೇಳಿದ್ದಾರೆ.