ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಳಿಗಾಲ ಶುರುವಾದೊಡನೆ ಬಿಸಿ ಟೀ–ಕಾಫಿಯ ಮೇಲಿನ ಆಸಕ್ತಿ ಸ್ವಲ್ಪ ಹೆಚ್ಚೇ ಆಗುತ್ತದೆ. ಬೆಳಗಿನ ಜಾವವಾಗಲಿ, ಸಂಜೆ ಹೊತ್ತಾಗಲಿ ಒಂದು ಕಪ್ ಕಾಫಿ ಸಿಕ್ಕರೆ ಸಾಕು, ದಣಿವು ಮಾಯವಾಗುತ್ತದೆ. ಈಗಾಗಲೇ ಬ್ಲ್ಯಾಕ್ ಕಾಫಿ, ಲೆಮನ್ ಕಾಫಿ, ಕೋಲ್ಡ್ ಕಾಫಿ, ತಂದೂರಿ ಕಾಫಿ ಹೀಗೆ ಅನೇಕ ವಿಧದ ಕಾಫಿಗಳು ಜನಪ್ರಿಯವಾಗಿವೆ. ಆದರೆ ಇವೆಲ್ಲಕ್ಕೂ ಮೀರಿ ಈಗ ಹೊಸದಾಗಿ ಸುದ್ದಿಯಲ್ಲಿರುವುದು ಜಿರಳೆ ಕಾಫಿ. ಕೇವಲ ಹೆಸರು ಕೇಳಿದರೆ ಅಚ್ಚರಿಗಿಂತ ಅಸಹ್ಯವೇ ಜಾಸ್ತಿ ಮೂಡಿಸುವ ಈ ಕಾಫಿ ಇದೀಗ ವಿದೇಶಗಳಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ.
ಹೊಸದನ್ನು ಪ್ರಯೋಗಿಸುವುದರಲ್ಲಿ ಸದಾ ಮುಂಚೂಣಿಯಲ್ಲಿರುವ ಚೀನಾ ದೇಶದಲ್ಲಿ ಈ ವಿಚಿತ್ರ ಕಾಫಿಗೆ ಭಾರೀ ಬೇಡಿಕೆ ಹುಟ್ಟಿಕೊಂಡಿದೆ. ಬೀಜಿಂಗ್ ನಗರದ ಕೀಟ ವಸ್ತುಸಂಗ್ರಾಹಲಯವೊಂದರಲ್ಲಿ ಈ ಜಿರಳೆ ಕಾಫಿಯನ್ನು ಪರಿಚಯಿಸಲಾಗಿದ್ದು, ಯುವಜನತೆ ಇದನ್ನು ಕುಡಿಯಲು ಸಾಲಿನಲ್ಲಿ ನಿಲ್ಲುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಕಾಫಿಗೆ ಜಿರಳೆಗಳ ಪುಡಿ ಹಾಗೂ ಒಣಗಿದ Mealworm ಹುಳಗಳನ್ನು ಬಳಸಲಾಗುತ್ತದೆ. ಇವುಗಳನ್ನು ಚೀನಾದ ಔಷಧಿ ಅಂಗಡಿಗಳಿಂದ ಸುರಕ್ಷತಾ ಮಾನದಂಡಗಳಂತೆ ಸಂಗ್ರಹಿಸಿ ಕಾಫಿಗೆ ಸೇರಿಸಲಾಗುತ್ತದೆ ಎನ್ನಲಾಗುತ್ತಿದೆ.
ಜಿರಳೆ ಕಾಫಿಯಲ್ಲಿ ಪ್ರೋಟಿನ್ ಮತ್ತು ಮಿನರಲ್ಸ್ ಹೆಚ್ಚು ಇರುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆ ಅಲ್ಲಿನ ಜನರಲ್ಲಿ ಇದೆ. ಜಿರಳೆ ಪುಡಿ ರಕ್ತ ಪರಿಚಲನೆಗೆ ಸಹಾಯಕವಾಗುತ್ತದೆ, ಮೀಲ್‌ವರ್ಮ್ ಹುಳಗಳು ದೇಹದ ಶಕ್ತಿಯನ್ನು ಹೆಚ್ಚಿಸುತ್ತವೆ ಎಂಬ ಮಾತುಗಳು ಹರಿದಾಡುತ್ತಿವೆ. ಈ ಕಾಫಿಯ ಒಂದು ಕಪ್‌ಗೆ 45 ಯುವಾನ್ ಬೆಲೆ ನಿಗದಿಯಾಗಿದ್ದು, ಭಾರತೀಯ ಮೌಲ್ಯದಲ್ಲಿ ಸುಮಾರು 570 ರೂಪಾಯಿಗೆ ಸಮವಾಗಿದೆ.
ಸದ್ಯ ಇದರ ರುಚಿ ಹುಳಿಯಾಗಿರುತ್ತದೆ ಎಂದು ಹೇಳಲಾಗುತ್ತಿದ್ದು, ಚೀನಾ ಇಂತಹ ವಿಚಿತ್ರ ಆಹಾರ ಪ್ರಯೋಗಗಳನ್ನು ಮಾಡುವುದು ಇದೇ ಮೊದಲಲ್ಲ, ಆದರೆ ಜಿರಳೆ ಕಾಫಿ ಮಾತ್ರ ಈ ಬಾರಿ ಎಲ್ಲರನ್ನೂ ಅಚ್ಚರಿಗೊಳಿಸಿದೆ.

