ಹೊಸದಿಗಂತ ವರದಿ ವಿಜಯಪುರ:
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಏನು ಮಾತನಾಡಿದ್ದಾರೆ ಎನ್ನುವುದು ಗೊತ್ತಿಲ್ಲ. ಸತ್ಯಾಸತ್ಯತೆ ತಿಳಿದುಕೊಂಡು ಮಾತನಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ನಾನು ಹೇಳಿದ ಲಿಸ್ಟ್ ಮಾತ್ರ ಆಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಮಾತನಾಡಿದ ವಿಡಿಯೋ ವೈರಲ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಅದನ್ನು ನೋಡಿಲ್ಲ, ಸತ್ಯಾಸತ್ಯತೆ ತಿಳಿದುಕೊಳ್ಳಬೇಕಾಗುತ್ತೆ ಎಂದರು.
ಈಗ ಆರ್ಟಿಫೀಷಿಯಲ್ ಇಂಟಲಿಜೆನ್ಸ್ ಬಂದಿದೆ. ಏನು ಬೇಕಾದರೂ, ಯಾರದ್ದು ಬೇಕಾದರೂ ವಿಡಿಯೋ ಮಾಡಬಹುದು. ಹಿಂದೆ ನಂದೇ ಒಂದು, ಒಬ್ಬ ಮಿಮಿಕ್ರಿ ಮಾಡಿದ್ದ. ಮಹಾರಾಷ್ಟ್ರದವ, ನಾಟಕ ಮಾಡುವವನು, ಮಿಮಿಕ್ರಿ ಮಾಡುತ್ತಿದ್ದ, ಅವನನ್ನು ಅರೆಸ್ಟ್ ಮಾಡಿಸಿ ಜೈಲಿಗೆ ಹಾಕಲಾಯಿತು. ಆರ್ಟಿಫಿಷಿಯಲ್ ಇಂಟಲಿಜೆನ್ಸ್ನಿಂದ ಹಸಿರು ಇರೋ ನಿಮ್ಮ ಶರ್ಟ್ ಕೆಂಪು ಮಾಡಬಹುದು ಎಂದರು.
ವಿಜಯಪುರ ಲೋಕಸಭಾ ಚುನಾವಣೆ ಆಕಾಂಕ್ಷಿಗಳ ಕುರಿತು ಪ್ರತಿಕ್ರಿಯಿಸಿ, ಬಹಳಷ್ಟು ಆಕಾಂಕ್ಷಿಗಳು ಇದ್ದಾರೆ. ಸತೀಶ ಜಾರಕಿಹೊಳಿ ಬಂದು ಮೀಟಿಂಗ್ ಮಾಡಿಕೊಂಡು ಹೋಗಿದ್ದಾರೆ. ಅದನ್ನ ಪಕ್ಷದಲ್ಲಿ ಚರ್ಚೆ ಮಾಡಲಾಗುವುದು. ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಎಲ್ಲವೂ ನಿರ್ಣಯ ಆಗುತ್ತದೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಹಾಗೂ ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಬರುತ್ತಾರೆ. ಕಾಯ್ದು ನೋಡಿ ಲೋಕಸಭಾ ಚುನಾವಣೆ ವೇಳೆಗೆ ಎಲ್ಲ ಸ್ವಚ್ಛವಾಗುತ್ತದೆ ಎಂದರು.