ಹೊಸದಿಗಂತ ಡಿಜಿಟಲ್ ಡೆಸ್ಕ್:
ವಡೋದರಾದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ನಾಲ್ಕು ವಿಕೆಟ್‌ಗಳ ಜಯ ದಾಖಲಿಸಿದೆ. ಈ ಪಂದ್ಯದಲ್ಲಿ ಭಾರತ ಗೆಲುವಿನ ನಡುವೆಯೇ, ವಿರಾಟ್ ಕೊಹ್ಲಿ ಅಭಿಮಾನಿಗಳ ವರ್ತನೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೋಹಿತ್ ಶರ್ಮಾ ಔಟಾದ ಸಂದರ್ಭದಲ್ಲಿ ಸ್ಟೇಡಿಯಂನಲ್ಲಿ ಕಂಡುಬಂದ ಸಂಭ್ರಮದ ಕುರಿತು ಕೊಹ್ಲಿ ಪ್ರತಿಕ್ರಿಯೆ ನೀಡಿದ್ದು, ಪಂದ್ಯ ನಂತರದ ಚರ್ಚೆಗೆ ಕಾರಣವಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಝಿಲೆಂಡ್ ತಂಡ 50 ಓವರ್‌ಗಳಲ್ಲಿ 300 ರನ್ ಗಳಿಸಿತು. 301 ರನ್ ಗುರಿ ಬೆನ್ನತ್ತಿದ ಟೀಂ ಇಂಡಿಯಾಗೆ ರೋಹಿತ್ ಶರ್ಮಾ ಮತ್ತು ಶುಭ್‌ಮನ್ ಗಿಲ್ ಉತ್ತಮ ಆರಂಭ ನೀಡಿದರು. ಆದರೆ ರೋಹಿತ್ 26 ರನ್ ಗಳಿಸಿ ಔಟಾದರು. ಅವರ ವಿಕೆಟ್ ಬಿದ್ದ ತಕ್ಷಣವೇ ವಿರಾಟ್ ಕೊಹ್ಲಿ ಬ್ಯಾಟಿಂಗ್‌ಗೆ ಬರಲಿದ್ದಾರೆಂಬ ಖುಷಿಯಲ್ಲಿ ಸ್ಟೇಡಿಯಂನಲ್ಲಿ ಅಭಿಮಾನಿಗಳ ಹರ್ಷೋದ್ಗಾರ ಗಗನಕ್ಕೇರಿತು.
ಈ ದೃಶ್ಯವನ್ನು ಗಮನಿಸಿದ ಕೊಹ್ಲಿ, ಪಂದ್ಯ ಮುಗಿದ ಬಳಿಕ ಪ್ರತಿಕ್ರಿಯಿಸಿ, “ಮೊದಲ ವಿಕೆಟ್ ಬಿದ್ದಾಗ ಸಂಭ್ರಮಿಸುವುದು ಔಟಾದ ಆಟಗಾರರಿಗೆ ನೋವು ತರಬಹುದು. ನನಗೂ ಇಂತಹ ಸಂಭ್ರಮ ಇಷ್ಟವಿಲ್ಲ. ಐಪಿಎಲ್‌ನಲ್ಲಿ ಧೋನಿಯ ವಿಚಾರದಲ್ಲೂ ಇದೇ ರೀತಿಯ ದೃಶ್ಯಗಳನ್ನು ನೋಡಿದ್ದೇನೆ” ಎಂದು ಹೇಳಿದರು. ಇಂತಹ ವರ್ತನೆ ನಿಲ್ಲಬೇಕು ಎಂಬ ಸಂದೇಶವನ್ನು ಅವರು ಪರೋಕ್ಷವಾಗಿ ನೀಡಿದರು.
ಇನ್ನು ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಕೊಹ್ಲಿ 91 ಎಸೆತಗಳಲ್ಲಿ 93 ರನ್‌ಗಳ ಅಮೋಘ ಇನ್ನಿಂಗ್ಸ್ ಆಡಿದರು. ಅವರ ಆಟದ ನೆರವಿನಿಂದ ಭಾರತ 49 ಓವರ್‌ಗಳಲ್ಲಿ 306 ರನ್ ಗಳಿಸಿ ಗೆಲುವು ಸಾಧಿಸಿತು. ಈ ಪ್ರದರ್ಶನಕ್ಕಾಗಿ ವಿರಾಟ್ ಕೊಹ್ಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತು. ಇದು ಅವರ 71ನೇ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಎನ್ನುವುದು ವಿಶೇಷ.

