ಹೊಸದಿಗಂತ ವರದಿ,ಶಿವಮೊಗ್ಗ :
ಆರ್. ಎಂ ಮಂಜುನಾಥ್ ಗೌಡರ ಮನೆ ಮೇಲೆ ಇಡಿ ದಾಳಿ ಆಗಿದೆ. ಅದನ್ನು ನಾನು ಮಾಡಿಸಿದ್ದೇನೆ ಎಂದು ಶುಕ್ರವಾರ ಪ್ರತಿಭಟನೆ ಮಾಡಿ ಕಾಂಗ್ರೆಸ್ ನವರು ಆರೋಪಿಸಿದ್ದಾರೆ. ಯಾರದ್ದೋ ಮೇಲೆ ನಂಜು ಕಾರಿ, ದ್ವೇಷ ರಾಜಕಾರಣ ನಾನು ಮಾಡಿಲ್ಲ. ವಾಮಮಾರ್ಗದಿಂದ ರಾಜಕಾರಣ ಮಾಡುವ ಅವಶ್ಯಕತೆ ನನಗಿಲ್ಲ ಎಂದು ಶಾಸಕ, ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.
ತೀರ್ಥಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು, ನನಗೆ ಕೇಳಿದ್ದಾರೆ ಗೆಣಸು ತಿನ್ನುತ್ತಿದ್ರಾ?ಅಂತ ನಾವು ಗೆಣಸು ತಿಂದೆ ಬೆಳೆದಿದ್ದು, ನಾನು ಸೋತಾಗ ಇನ್ನೂ ಮೇಲೆ ಜ್ಞಾನೇಂದ್ರ ಕಾಯಂ ಆಗಿ ಗುಡ್ಡೆಕೊಪ್ಪದಲ್ಲಿ ದೋಸೆ ಮಾಡಬೇಕು ಎಂದು ಹೇಳಿದ್ದರು, ಇವರ ಹಾಗೆ ನಾವು ಚಿನ್ನದ ಚಮಚ ಕಚ್ಚಿಕೊಂಡು ಹುಟ್ಟಿದವರಲ್ಲ, ಆರ್ ಎಂ ಮಂಜುನಾಥ್ ಗೌಡರ ಮನೆ ಮೇಲೆ ನೆಡೆದ ಇಡಿ ದಾಳಿಯಿಂದ ಅತ್ಯಂತ ಸಂತೋಷ ಪಟ್ಟ ವ್ಯಕ್ತಿ ಯಾರು ಎಂದರೆ ಅದು ಅವರೇ ಎಂದು ಕಿಮ್ಮನೆ ರತ್ನಾಕರ್ ಗೆ ಟಾಂಗ್ ಕೊಟ್ಟರು.
ಕಳ್ಳ-ಸುಳ್ಳ ಎಂದಿದ್ದ ಕಿಮ್ಮನೆ:
ಕಿಮ್ಮನೆ ರತ್ನಾಕರ್ ಸ್ವತಃ ಮಂತ್ರಿಯಾಗಿದ್ದಾಗ ಶಾಸನ ಸಭೆಯಲ್ಲಿ 62 ಕೋಟಿ 77 ಲಕ್ಷ ಬಂಗಾರ ಇಲ್ಲದೆ ಚೀಟಿ ಹಾಕಿ ಚಿನ್ನದ ಮೇಲೆ ಸಾಲ ಕೊಟ್ಟಿದ್ದಾರೆ ಎಂದು ಅವರೇ ಹೇಳಿದ್ದರು. ಡಿಸಿಸಿ ಬ್ಯಾಂಕ್ ಪ್ರಕರಣವನ್ನು ಸಿಬಿಐ ಗೆ ವಹಿಸಬೇಕು ಎಂದು ಒತ್ತಾಯ ಮಾಡಿದ್ದೂ ಇವರೇ. ಕಾರ್ಯಕರ್ತರ ಸಭೆಯಲ್ಲಿ ಆರ್.ಎಂ ಮಂಜುನಾಥ ಗೌಡರಿಗೆ ಕಳ್ಳ ಸುಳ್ಳ ಎಂದು ಇವರೇ ಮಾತನಾಡಿದ್ದರು. ಆ ರೀತಿಯ ಯಾವುದೇ ಶಬ್ದಗಳನ್ನು ನಾನು ಬಳಸಿಲ್ಲ. ಆರ್.ಎಂ ಮಂಜುನಾಥ್ ಗೌಡರು ಕಾಂಗ್ರೆಸ್ ಸೇರಿದ ಮೇಲೆ ಯಾವುದೇ ವೇದಿಕೆಯಲ್ಲಿ ಒಟ್ಟಿಗೆ ಎಲ್ಲೂ ಕುಳಿತುಕೊಳ್ಳುತ್ತಿರಲಿಲ್ಲ. ಇಡಿ ದಾಳಿಗೂ ನಮಗೂ ಸಂಭಂಧವಿಲ್ಲ, ಹಾಗೇನಾದರೂ ನಾವೇ ಮಾಡಿಸುವುದಾಗಿದ್ದಾರೆ ಇಡಿ ಅಲ್ಲ, ಸಿಬಿಐ ಗೆ ಕೊಡುತ್ತಿದ್ದೆವು ಎಂದು ಕುಟುಕಿದರು.