ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನ ಖ್ಯಾತ ನಟ, ಉದ್ಯಮಿ ವಿವೇಕ್ ಒಬೆರಾಯ್ ಕಾಮಿಡಿ, ಸೀರಿಯಸ್ ಎಲ್ಲ ಪಾತ್ರದಲ್ಲಿಯೂ ನಟಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ. ಇದೀಗ ಬಿಗ್ ಬಜೆಟ್ ಸಿನಿಮಾ ರಾಮಾಯಣದಲ್ಲಿ:ನಟಿಸುತ್ತಿದ್ದಾರೆ.
ಇತ್ತ ವಿಶೇಷ ವಿಚಾರ ಏನೆಂದರೆ, ರಾಮಾಯಣದ ಸಂಭಾವನೆ ಮೊತ್ತವನ್ನು ಕ್ಯಾನ್ಸರ್ ನಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗೆ ನೀಡಲು ನಿರ್ಧಾರ ಕೈಗೊಂಡಿದ್ದಾರೆ. ಈ ಹಿಂದೆ ಅನೇಕ ಬಾರಿ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಅವರು ಈ ಸಲ ತಮ್ಮ ಸಂಭಾವನೆ ಮೊತ್ತವನ್ನೇ ದಾನವಾಗಿ ನೀಡಲು ಮುಂದಾಗಿದ್ದು ಅವರ ಈ ಸಮಾಜ ಸೇವೆಗೆ ಅಭಿಮಾನಿಗಳು ಸೋಶಿಯಲ್ ಮಿಡಿಯಾದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾವು ರಿಲೀಸ್ ಗೂ ಮೊದಲೇ ಪ್ರೇಕ್ಷಕರಲ್ಲಿ ನಿರೀಕ್ಷೆ ಹುಟ್ಟಿಸಿದ್ದು, ರಣ ಬೀರ್ ಕಪೂರ್ ರಾಮನ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ವಿವೇಕ್ ರಾವಣನ ಸಹೋದರ ವಿಭೀಷಣನ ಪಾತ್ರವನ್ನು ನಿರ್ವಹಿಸಲಿದ್ದಾರೆ.
ಇತ್ತೀಚಿನ ಖಾಸಗಿ ಮಾಧ್ಯಮ ಒಂದರ ಸಂದರ್ಶನ ಸಂದರ್ಭದಲ್ಲಿ ಅವರು ಈ ಬಗ್ಗೆ ಮಾತನಾಡಿ, ರಾಮಾಯಣ ಸಿನಿಮಾದಲ್ಲಿ ಅಭಿನಯಿಸಲು ನನಗೆ ಒಂದು ಪೈಸೆಯೂ ಬೇಡ, ಈ ಸಂಭಾವನೆ ಮೊತ್ತವನ್ನು ನಾನು ಕ್ಯಾನ್ಸರ್ ನಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗೆ ದಾನ ಮಾಡಲು ಬಯ ಸುತ್ತೇನೆ. ಈ ಸಿನಿಮಾ ಮಾಡುತ್ತಿರುವ ಬಗ್ಗೆ ನನಗೆ ತುಂಬಾ ಖುಷಿ ಇದೆ, ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಕೊಂಡೊಯ್ಯಲಾಗುತ್ತಿದ್ದು ಇದಕ್ಕೆ ಎಲ್ಲರ ಬೆಂಬಲವೂ ಅಗತ್ಯ ಎಂದು ಹೇಳಿದ್ದಾರೆ.
ರಾಮಾಯಣ ಕುರಿತಾದ ಸಿನಿಮಾವು ಪೌರಾಣಿಕವೇ ಅಥವಾ ಅದು ಐತಿ ಹಾಸಿಕವೇ ಎಂಬ ಚರ್ಚೆ ಈ ಹಿಂದಿನಿಂದಲೂ ನಡೆಯುತ್ತಿದೆ. ಆದರೆ, ನನಗೆ ಇದು ಐತಿಹಾಸಿಕ ಎಂಬ ಭಾವನೆ ಇದೆ. ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿರುವ ವಿಎಫ್ಎಕ್ಸ್ (VFX) ಕಂಪೆನಿಯ ಸಹಯೋಗ ದೊಂದಿಗೆ ರಾಮಾಯಣ ಚಿತ್ರವು ಸಿದ್ಧವಾಗುತ್ತಿದೆ. ನಟರಾದ ಯಶ್, ರಾಕುಲ್ ಪ್ರೀತ್ ಸಿಂಗ್ ಜೊತೆ ಅಭಿನಯಿಸಲು ಮತ್ತು ನಿರ್ಮಾಪಕ ನಮಿತ್ , ನಿರ್ದೇಶಕ ನಿತೇಶ್ ಅವರೊಂದಿಗೆ ಕೆಲಸ ಮಾಡಲು ನನಗೆ ಬಹಳ ಖುಷಿ ಇದೆ. ಸಿನಿಮಾದಲ್ಲಿ ನನ್ನ ಪಾತ್ರದ ಕೆಲವು ದಿನಗಳ ಚಿತ್ರೀಕರಣ ಬಾಕಿ ಇದೆ ಎಂದು ನಟ ವಿವೇಕ್ ಅವರು ಹೇಳಿದ್ದಾರೆ.
ಈ ಸಿನಿಮಾ ಎರಡು ಭಾಗದಲ್ಲಿ ರಿಲೀಸ್ ಆಗಲಿದ್ದು ಮೊದಲ ಭಾಗವು 2026ರ ದೀಪಾವಳಿ ಹಾಗೂ ಎರಡನೇ ಭಾಗ 2027ರ ದೀಪಾವಳಿಯಂದು ಬಿಡುಗಡೆಯಾಗಲಿದೆ.

