ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಶಾಸಕ ಕುಲದೀಪ್ ಸೆಂಗಾರ್ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿದ್ದ ದೆಹಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ಸೋಮವಾರ ತಡೆ ನೀಡಿದ್ದು,ಈ ತೀರ್ಪನ್ನು ಸಂತ್ರಸ್ತೆ ಸ್ವಾಗತಿಸಿದ್ದಾರೆ.
ಈ ನಿರ್ಧಾರದಿಂದ ನನಗೆ ತುಂಬಾ ಸಂತೋಷವಾಗಿದೆ. ಸುಪ್ರೀಂ ಕೋರ್ಟ್‌ನಿಂದ ನನಗೆ ನ್ಯಾಯ ಸಿಕ್ಕಿದೆ. ನಾನು ಮೊದಲಿನಿಂದಲೂ ನ್ಯಾಯಕ್ಕಾಗಿ ಧ್ವನಿ ಎತ್ತುತ್ತಿದ್ದೇನೆ. ಆರೋಪಿ, ಮಾಜಿ ಶಾಸಕನನ್ನು ಗಲ್ಲಿಗೇರಿಸುವವರೆಗೆ ಕಾನೂನು ಹೋರಾಟ ಮುಂದುವರಿಸುವುದಾಗಿ ಸಂತ್ರಸ್ತೆ ಪ್ರತಿಜ್ಞೆ ಮಾಡಿದ್ದಾರೆ.
ನಾನು ಯಾವುದೇ ನ್ಯಾಯಾಲಯದ ವಿರುದ್ಧ ಯಾವುದೇ ಆರೋಪಗಳನ್ನು ಮಾಡುವುದಿಲ್ಲ. ನನಗೆ ಎಲ್ಲಾ ನ್ಯಾಯಾಲಯಗಳ ಮೇಲೆ ನಂಬಿಕೆ ಇದೆ. ಆದರೆ ಸುಪ್ರೀಂ ಕೋರ್ಟ್ ನನಗೆ ನ್ಯಾಯ ನೀಡಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ತನಿಖಾ ಸಂಸ್ಥೆ(ಸಿಬಿಐ) ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಸುಪ್ರೀಂ ಕೋರ್ಟ್, 2017ರ ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ಸೆಂಗಾರ್ ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿದ ದೆಹಲಿ ಹೈಕೋರ್ಟ್ ಆದೇಶಕ್ಕೆ ಸೋಮವಾರ ತಡೆ ನೀಡಿದೆ. ಸುಪ್ರೀಂ ಕೋರ್ಟ್ ಸೆಂಗಾರ್‌ಗೆ ನೋಟಿಸ್ ಜಾರಿ ಮಾಡಿದ್ದು, ಪ್ರತಿಕ್ರಿಯೆ ಸಲ್ಲಿಸುವಂತೆ ನಿರ್ದೇಶಿಸಿದೆ.

