ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಂಸದ ಡಿ.ಕೆ.ಸುರೇಶ್ ಅವರಿಂದು ರಾಮನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಸೋಲಿನ ಆತ್ಮಾವಲೋಕನ ಮಾಡಿದ್ದಾರೆ.
ಸ್ಥಳೀಯ ಶಾಸಕರು, ಮುಖಂಡರ ಜೊತೆ ಸುದ್ದಿಗೋಷ್ಠಿ ನಡೆಸಿದ ಅವರು, ಕ್ಷೇತ್ರದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಧನ್ಯವಾದ ತಿಳಿಸಿದ್ದಾರೆ.
ಕಳೆದ 10 ವರ್ಷ 8 ತಿಂಗಳ ಕಾಲ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಎಲ್ಲರೂ ಸಹಕಾರ, ಪ್ರೋತ್ಸಾಹ ಕೊಟ್ಟಿದ್ದಾರೆ. ನಾನು ರಾಜಕಾರಣಕ್ಕೆ ಬರಬೇಕು ಅಂತ ಬಂದವನಲ್ಲ. ರಾಜಕೀಯ ಆಸಕ್ತಿಯೂ ನನಗಿರಲಿಲ್ಲ. ಉಪಚುನಾವಣೆಯಲ್ಲಿ ರಾಜ್ಯದ ನಾಯಕರು ನನ್ನಮೇಲೆ ಹಾಗೂ ಡಿಕೆಶಿ ಮೇಲೆ ಒತ್ತಡ ಹಾಕಿ ನಿಲ್ಲಿಸಿದರು. ಆಗ ಕಾಂಗ್ರೆಸ್‌ನ ಎಲ್ಲಾ ನಾಯಕರು, ಮುಖಂಡರು ಚುನಾವಣೆ ಮಾಡಿ ಗೆಲ್ಲಿಸಿದರು. ಮೂರು ಚುನಾವಣೆಯಲ್ಲಿ ನಾನು ಈ ಕ್ಷೇತ್ರದಲ್ಲಿ ಸೇವೆ ಮಾಡಿದ್ದೇನೆ. ಪ್ರಾಮಾಣಿಕವಾಗಿ ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ ಎಂದರು.
ನಾನು ಮಾಡಿದ ಕೆಲಸ ಕಾರ್ಯಗಳನ್ನ ಜನರ ಮುಂದೆ ಇಟ್ಟು ಈ ಬಾರಿ ಚುನಾವಣೆಗೆ ಹೋದೆ. ಕನ್ನಡಿಗರ ಪರವಾಗಿ ಗಟ್ಟಿಧ್ವನಿ ಎತ್ತಿ ಟೀಕೆಗೂ ಒಳಗಾದೆ. ಕರ್ನಾಟಕದ ತೆರಿಗೆ ಹಣದ ವಿಚಾರವಾಗಿ ಹೋರಾಟ ಮಾಡಿದೆ. ನಾನು ಮತ ಕೇಳುವ ಸಂದರ್ಭದಲ್ಲಿ ನನ್ನ ಕೆಲಸಕ್ಕೆ ಕೂಲಿ ಕೊಡಿ ಅಂತ ಚುನಾವಣೆಗೆ ಬಂದೆ. ಆದರೆ ಜನ ಅದನ್ನು ತಿರಸ್ಕಾರ ಮಾಡಿದ್ದಾರೆ. ಈ ಸೋಲನ್ನು ಸಂತೋಷದಿಂದ ಒಪ್ಪಿದ್ದೇನೆ ಎಂದು ಹೇಳಿದರು.
ನನಗೆ ಯಾರೂ ಹಿತಶತ್ರುಗಳಿಲ್ಲ, ನನಗೆ ನಾನೇ ಶತ್ರು. ಜನ ನನಗೆ ವಿರಾಮ ಕೊಟ್ಟಿದ್ದಾರೆ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಈ ಚುನಾವಣೆಯ ಸೋಲು ನನ್ನ ವೈಯಕ್ತಿಕ ಸೋಲು. ಇದಕ್ಕೆ ನಾನೇ ಹೊಣೆ. ಇದು ಬಿಜೆಪಿ-ಜೆಡಿಎಸ್‌ನ ಗೆಲುವಲ್ಲ. ಇದು ಜಾತಿ, ಧರ್ಮ, ಭಾವನೆ, ಅಸೂಯೆಯ ಗೆಲುವು. ಗ್ಯಾರಂಟಿಗಳಿಗಿಂತ ಪ್ರಬಲವಾಗಿರೋದು ಜಾತಿ, ಧರ್ಮ, ಭಾವನೆ. ರಾಜಕಾರಣದಲ್ಲಿ ಜಾತಿ ಇಷ್ಟೊಂದು ಪ್ರಮುಖ ಆಗುತ್ತೆ ಅಂತ ನಿರೀಕ್ಷೆ ಮಾಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.