ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಐ ಲವ್ ಯು’ ಎನ್ನುವುದು ಭಾವನೆಗಳ ಅಭಿವ್ಯಕ್ತಿಯೇ ಹೊರತು ಅದರಲ್ಲಿ ಲೈಂಗಿಕ ಉದ್ದೇಶ ಇರುವುದಿಲ್ಲ’ ಎಂದು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ಅಭಿಪ್ರಾಯಪಟ್ಟಿದೆ.
2015ರಲ್ಲಿ ವ್ಯಕ್ತಿಯೊಬ್ಬ 17 ವರ್ಷದ ಬಾಲಕಿಯೊಬ್ಬಳ ಕೈಹಿಡಿದು ‘I Love You’ ಎಂದು ಹೇಳಿದ್ದಕ್ಕೆ ಲೈಂಗಿಕ ಕಿರುಕುಳ ಆರೋಪದಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಸೆಷನ್ ನ್ಯಾಯಾಲಯವು, ತಪ್ಪಿತಸ್ಥ ಎಂದು ಪರಿಗಣಿಸಿ ಪೋಕ್ಸೋ ಕಾಯ್ದೆಯಡಿ 2017ರಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿತ್ತು. ಕೆಳಹಂತದ ನ್ಯಾಯಾಲಯದ ಆದೇಶವನ್ನು ವ್ಯಕ್ತಿಯು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಇದರ ವಿಚಾರಣೆ ನಡೆಸಿದ ಕೋರ್ಟ್, 2015ರಲ್ಲಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿದ್ದ 35 ವರ್ಷದ ವ್ಯಕ್ತಿಯನ್ನು ಖುಲಾಸೆಗೊಳಿಸಿದೆ.
ಯಾವುದೇ ಲೈಂಗಿಕ ಕಿರುಕುಳದಲ್ಲಿ ಅನುಚಿತ ಸ್ಪರ್ಶ, ಬಲವಂತವಾಗಿ ಬಟ್ಟೆ ಕಳಚುವುದು, ಅಸಭ್ಯ ಸನ್ನೆಗಳು ಅಥವಾ ಮಹಿಳೆಯ ನಮ್ರತೆಯನ್ನು ಅವಮಾನಿಸುವ ಉದ್ದೇಶದಿಂದ ಮಾಡಿದ ಟೀಕೆಗಳು ಸೇರಿರುತ್ತವೆ ಎಂದು ನ್ಯಾಯಮೂರ್ತಿ ಊರ್ಮಿಳಾ ಜೋಶಿ-ಫಾಲ್ಕೆ ಅವರಿದ್ದ ಪೀಠ ಆದೇಶದಲ್ಲಿ ತಿಳಿಸಿದೆ.
ಸಂತ್ರಸ್ತೆಯೊಂದಿಗೆ ಲೈಂಗಿಕ ಸಂಪರ್ಕ ಸಾಧಿಸುವುದು ಆತನ ನಿಜವಾದ ಉದ್ದೇಶ ಎಂಬುದನ್ನು ಸೂಚಿಸಲು ಯಾವುದೇ ಪುರಾವೆಯಿಲ್ಲ ಎಂದು ಹೇಳಿದ ಹೈಕೋರ್ಟ್, ಆ ವ್ಯಕ್ತಿಯ ಶಿಕ್ಷೆಯನ್ನು ರದ್ದುಗೊಳಿಸಿತು.
‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದು ಹೇಳಿದ ಪದಗಳು ಶಾಸಕಾಂಗವು ಯೋಚಿಸಿದಂತೆ ಲೈಂಗಿಕ ಉದ್ದೇಶಕ್ಕೆ ಸಮನಾಗಿರುವುದಿಲ್ಲ. ಲೈಂಗಿಕತೆಯೇ ಇದರ ಹಿಂದಿನ ನಿಜವಾದ ಉದ್ದೇಶ ಎಂಬುದನ್ನು ಸೂಚಿಸಲು ಇನ್ನೂ ಹೆಚ್ಚಿನ ಏನಾದರೂ ಇರಬೇಕು’ ಎಂದು ನ್ಯಾಯಾಲಯ ಹೇಳಿದೆ.
ಪ್ರಾಸಿಕ್ಯೂಷನ್ ಪ್ರಕಾರ, ಹುಡುಗಿ ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ಆ ವ್ಯಕ್ತಿ ಆಕೆಯ ಕೈ ಹಿಡಿದು, ಆಕೆಯ ಹೆಸರು ಕೇಳಿದ್ದಾನೆ. ಬಳಿಕ ‘ಐ ಲವ್ ಯೂ’ ಎಂದು ಹೇಳಿದ್ದಾನೆ. ಕೂಡಲೇ ಹುಡುಗಿ ಅಲ್ಲಿಂದ ಹೊರಟು ಮನೆಗೆ ಹೋಗಿದ್ದಾಳೆ ಮತ್ತು ತನ್ನ ತಂದೆಗೆ ಘಟನೆಯ ಬಗ್ಗೆ ಹೇಳಿದ್ದಾಳೆ. ಬಳಿಕ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಈ ಪ್ರಕರಣವು ಕಿರುಕುಳ ಅಥವಾ ಲೈಂಗಿಕ ಕಿರುಕುಳದ ವ್ಯಾಪ್ತಿಗೆ ಬರುವುದಿಲ್ಲ. ಯಾವುದೇ ಲೈಂಗಿಕ ಕಿರುಕುಳದಲ್ಲಿ ಅನುಚಿತ ಸ್ಪರ್ಶ, ಬಲವಂತವಾಗಿ ವಸ್ತ್ರ ಕಳಚುವಿಕೆ, ಅಸಭ್ಯ ಸನ್ನೆಗಳು ಅಥವಾ ಮಹಿಳೆಯ ಘನತೆಯನ್ನು ಅವಮಾನಿಸುವ ಉದ್ದೇಶದಿಂದ ನೀಡಿದ ಹೇಳಿಕೆಗಳು ಸೇರಿವೆ ಎಂದು ಹೈಕೋರ್ಟ್ ಹೇಳಿದೆ.