ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇವತ್ತು ಯಾವ ಸಿಎಂ ಅಧಿಕಾರದಲ್ಲಿದ್ದಾರೋ ಅವರನ್ನು ಅಂದು ಡಿಸಿಎಂ, ಹಣಕಾಸು ಮಂತ್ರಿಯನ್ನಾಗಿ ಮಾಡಿದ್ದೆ ನಾನು ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ ಉದಯವಾಗಿ 25 ವರ್ಷ ತುಂಬಿದ ಹಿನ್ನೆಲೆ ಆಯೋಜಿಸಲಾಗಿದ್ದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಮಾತನಾಡಿದ ಅವರು, ಯಾವ ಸಿಎಂ ಇವತ್ತು ಅಧಿಕಾರದಲ್ಲಿದ್ದಾರೋ ಅವರನ್ನ ಸಿಎಂ ಮಾಡಬೇಕು ಎಂಬ ಉದ್ದೇಶದಿಂದ ಅಂದಿನ ಕಾಶ್ಮೀರ ಸರ್ಕಾರದ ಮಾದರಿಯಲ್ಲಿ ಯತ್ನಿಸಿದೆ. ಸೋನಿಯಾಗಾಂಧಿ ಮನೆಗೆ ಮೂರು ಸಾರಿ ಹೋಗಿ, ಸಿದ್ದರಾಮಯ್ಯರನ್ನ ಡಿಸಿಎಂ, ಸಿಎಂ ಮಾಡಿ ಎಂದು ಹೇಳಿದ್ದೆ. ಈಗಲೂ ಸೋನಿಯಾಗಾಂಧಿ ಅವರ ಬಳಿ ಕೇಳಲಿ. ಜೆಡಿಎಸ್‌ನಲ್ಲಿ ಇದ್ದಿದ್ರೆ ಅಪ್ಪ, ಮಗ ಸಿಎಂ ಆಗಲು ಬಿಡ್ತಿರಲಿಲ್ಲ ಎನ್ನುತ್ತಾರೆ. ಆದರೆ ಆಗ ಸೋನಿಯಾ ಗಾಂಧಿ ಅವರು ಕಾಂಗ್ರೆಸ್‌ಗೆ ಸಿಎಂ ಪಟ್ಟ ಕೊಡದಿದ್ರೆ ಚುನಾವಣೆಗೆ ಹೋಗ್ತೆವೆ ಎಂದಿದ್ರು. 2 ಕೋಟಿ ರೂ. ಸಾಲ ತಂದು ನಾನು ಚುನಾವಣೆಗೆ ಹೋಗಿದ್ದೆ. ಆನಂತರ ಶ್ರೀಮಾನ್ ಸಿದ್ದರಾಮಯ್ಯನವರನ್ನ ಕನ್ನಡ ಕಾವಲು ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದೆ. ಅವರೇನು ಆಕ್ಸ್‌ಫರ್ಡ್ ಯುನಿವರ್ಸಿಟಿಯಿಂದ ಅಧ್ಯಯನ ಮಾಡಿ ಬಂದಿದ್ರಾ? ಸುಪ್ರಿಂಕೋರ್ಟ್ ಲಾಯರ್ ಆಗಿದ್ರಾ? ಮೈಸೂರಲ್ಲಿ ಒಂದೆರಡು ಕೇಸ್ ಮಾಡಿದ್ರೊ ಇಲ್ವೋ ಗೊತ್ತಿಲ್ಲ. ಸಾಲ ತಂದು ನೌಕರರಿಗೆ ಸಂಬಳ ಕೊಡ್ತಿದ್ದ ಸಂದರ್ಭದಲ್ಲಿ ಹಣಕಾಸು ಸಚಿವರನ್ನಾಗಿ ಮಾಡಿದ್ದೆ. ಆಗ ಇವರ ಕೊಡುಗೆ ಏನಿತ್ತು ಎಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಅವರನ್ನ ಪಕ್ಷದ ಅಧ್ಯಕ್ಷ ಮಾಡಬೇಕು ಅಂದಾಗ ರಾಮಕೃಷ್ಣ ಹೆಗಡೆ ಅವರು ಯಾರನ್ನಾದ್ರು ಮಾಡು ಸಿದ್ದರಾಮಯ್ಯ ಮಾತ್ರ ಮಾಡಬೇಡ. ಸಿದ್ದರಾಮಯ್ಯ ಮೋಸ ಮಾಡ್ತಾನೆ ಅಂದಿದ್ರು. ಜಾಲಪ್ಪನ್ನ ಮುಖ್ಯಮಂತ್ರಿ ಮಾಡಬೇಕು ಅಂತ ಓಬಿಸಿ ಲೀಡರ್ ಅಂತ ದಾವಣಗೆರೆಯಲ್ಲಿ ಸಮಾವೇಶ ಆಯ್ತು. ಸಮಾವೇಶದಲ್ಲಿ ನನ್ನ ವಿರುದ್ಧವೇ ಮಾತನಾಡಿದರು. ಆನಂತರ ಕಾಂಗ್ರೆಸ್‌ಗೆ ಸೇರೋ ಪ್ರಯತ್ನ ಮಾಡಿದರು. ಬಳಿಕ ಎಸ್.ಎಂ.ಕೃಷ್ಣ ಅವರ ಜೊತೆ ಮಾತುಕತೆ ಆಗಿ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಸೇರಿಕೊಂಡರು ಎಂದು ಮಾಹಿತಿ ಬಿಚ್ಚಿಟ್ಟಿದ್ದಾರೆ.
18 ಜನರನ್ನ ದೆಹಲಿಗೆ ಕಳಿಸಿ ಕುಮಾರಸ್ವಾಮಿ ಸರ್ಕಾರ ತೆಗೆದರು. ಅದಾದ ಬಳಿಕ ಇವರ ಸಹವಾಸ ಬೇಡ ಅಂತ ಎನ್‌ಡಿಎ ಜೊತೆ ಸೇರಿದ್ವಿ. ತಮಿಳುನಾಡಿನಲ್ಲಿ ನಮ್ಮ ಸಮುದಾಯ 30 ಲಕ್ಷ ಜನ ಇದ್ದಾರೆ. ಅಲ್ಲಿ ಸಂಘಟನೆ ಮಾಡಿ. ಮುಂದಿನ ಚುನಾವಣೆಯಲ್ಲಿ ಶಾ, ಮೋದಿ ಜೊತೆ ಮಾತಾಡಿ ಅಲ್ಲಿ ಎರಡು ಟಿಕೆಟ್ ತರೋ ಪ್ರಯತ್ನ ಮಾಡ್ತೀನಿ. ದೇವೇಗೌಡ ಯಾವತ್ತು ಕೂತುಕೊಳ್ಳೊಲ್ಲ. ಎಲ್ಲಾ ಕಡೆ ನಾನು ಹೋಗ್ತೀನಿ. ನಾವು ಎನ್‌ಡಿಎ ಜೊತೆ ಇದ್ದೇವೆ ಅಂತ ಕಾರ್ಯಕರ್ತರು ಮರೆಯಬಾರದು. ನಿತೀಶ್ ಕುಮಾರ್ ಸಿಎಂ ಆಗಿದ್ದಾರೆ. ಕುಮಾರಸ್ವಾಮಿ ಅವರಿಗೆ ಮೋದಿ ಅವರು ದೊಡ್ಡ ಖಾತೆ ಕೊಟ್ಟು 8ನೇ ಸ್ಥಾನದಲ್ಲಿ ನಮಗೆ ಜಾಗ ಕೊಟ್ಟಿದ್ದಾರೆ. ನಾವು ಯಾವುದೇ ಕಾರಣಕ್ಕೂ ಎನ್‌ಡಿಎ ಸಂಪರ್ಕ ಕಳೆದುಕೊಳ್ಳಲ್ಲ. ಆದ್ರೆ ನಮ್ಮ ಪಕ್ಷವೂ ಸಂಘಟನೆ ಆಗಬೇಕು ಎಂದು ಕಾರ್ಯಕರ್ತರು, ನಾಯಕರಿಗೆ ಕರೆ ನೀಡಿದ್ದಾರೆ.

