ಹೊಸದಿಗಂತ ಡಿಜಿಟಲ್ ಡೆಸ್ಕ್:
ಸತತ ಮೂರನೇ ಬಾರಿಗೆ ಗದ್ದುಗೆ ಏರಲು ಎನ್‌ಡಿಎ ಸಜ್ಜಾಗುತ್ತಿದ್ದು, ಈಗಾಗಲೇ ಒಕ್ಕೂಟದ ನಾಯಕರು ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದಾರೆ. ಅದರಂತೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಿ ನಾಳೆ (ಜೂನ್ 9) ಪ್ರಮಾಣ ವಚನ ಸ್ವೀಕರಿಸಲಿದ್ದು, ಇದಕ್ಕಾಗಿ ವೇದಿಕೆ ಸಿದ್ಧವಾಗಿದೆ.
ಈ ಮಧ್ಯೆ ಎನ್‌ಡಿಎ ಒಕ್ಕೂಟಕ್ಕೆ ಬೆಂಬಲ ಸೂಚಿಸಿರುವ ನಿತೀಶ್ ಕುಮಾರ್ ಅವರಿಗೆ ಪ್ರತಿಪಕ್ಷಗಳ I.N.D.I.A ಮೈತ್ರಿಕೂಟ ಪ್ರಧಾನಿ ಹುದ್ದೆಯ ಆಫರ್ ನೀಡಿತ್ತು ಎಂದು ಜೆಡಿಯು ನಾಯಕ ಕೆ.ಸಿ.ತ್ಯಾಗಿ (KC Tyagi) ಬಾಂಬ್ ಸಿಡಿಸಿದ್ದಾರೆ.
ತಮಗೆ ಬೆಂಬಲ ನೀಡಿದರೆ ಪ್ರಧಾನ ಮಂತ್ರಿ ಹುದ್ದೆ ನೀಡುವುದಾಗಿ ನಿತೀಶ್ ಕುಮಾರ್ ಅವರಿಗೆ I.N.D.I.A ಒಕ್ಕೂಟದ ನಾಯಕರು ಆಮಿಷ ಒಡ್ಡಿದ್ದರು. ಆದರೆ ನಿತೀಶ್ ಕುಮಾರ್ ಈ ಆಫರ್ ನಿರಾಕರಿಸಿದ್ದಾರೆ ಎಂದು ತ್ಯಾಗಿ ಹೇಳಿದ್ದಾರೆ.
ಬಿಹಾರದಲ್ಲಿ 12 ಲೋಕಸಭಾ ಕ್ಷೇತ್ರಗಳನ್ನು ಗೆದ್ದುಕೊಂಡ ನಿತೀಶ್ ಕುಮಾರ್ ಹಾಗೂ 16 ಲೋಕಸಭಾ ಸ್ಥಾನಗಳನ್ನು ಗೆದ್ದ ಆಂಧ್ರ ಪ್ರದೇಶದ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಕೂಡ ಸದ್ಯ ದೇಶದಲ್ಲಿ ಕಿಂಗ್ ಮೇಕರ್ ಆಗಿ ಹೊರ ಹೊಮ್ಮಿದ್ದಾರೆ. ಹೀಗಾಗಿ ಬೆಂಬಲ ನೀಡುವಂತೆ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರೊಂದಿಗೆ I.N.D.I.A ಒಕ್ಕೂಟವು ಮಾತುಕತೆ ನಡೆಸಿದೆ ಎಂಬ ವರದಿಗಳ ಮಧ್ಯೆ ಕೆ.ಸಿ.ತ್ಯಾಗಿ ಈ ಸ್ಪಷ್ಟನೆ ನೀಡಿದ್ದಾರೆ.
ಇಬ್ಬರೂ ನಾಯಕರು I.N.D.I.A ಒಕ್ಕೂಟದ ಆಫರ್ ನಿರಾಕರಿಸಿದ್ದು, ಈಗಾಗಲೇ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲಿಖಿತ ಬೆಂಬಲ ನೀಡಿದ್ದಾರೆ. ಆದಾಗ್ಯೂ ಅವರು ಕ್ಯಾಬಿನೆಟ್ ಸ್ಥಾನಗಳು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ನಿತೀಶ್ ಕುಮಾರ್ ಅವರನ್ನು I.N.D.I.A ಒಕ್ಕೂಟದ ರಾಷ್ಟ್ರೀಯ ಸಂಚಾಲಕರನ್ನಾಗಿ ಮಾಡಲು ನಿರಾಕರಿಸಲಾಗಿತ್ತು. ಈಗ ಅವರೇ ಪ್ರಧಾನಿಯನ್ನಾಗಿ ಮಾಡಲು ಪ್ರಸ್ತಾಪಗಳನ್ನು ಮುಂದಿಡುತ್ತಿದ್ದಾರೆ ಎಂದು ಹೇಳಿದ್ದಾರೆ.
ನಿತೀಶ್ ಕುಮಾರ್ ಅವರು I.N.D.I.A ಒಕ್ಕೂಟ ತೊರೆಯಲು ಸರಿಯದ ಪ್ರಾತಿನಿಧ್ಯ ಲಭಿಸದೇ ಇರುವುದು ಕಾರಣ ಎಂದೂ ತ್ಯಾಗಿ ವಿವರಿಸಿದ್ದಾರೆ. ಯಾವುದೇ ಕಾರಣಕ್ಕೂ ಇನ್ನು I.N.D.I.A ಒಕ್ಕೂಟಕ್ಕೆ ಮರಳುವ ಪ್ರಶ್ನೆಯೇ ಇಲ್ಲ. ಬಿಜೆಪಿ ಸರಿಯಾದ ಗೌರವ ನೀಡುತ್ತಿದೆ ಎಂದು ಅವರು ಹೇಳಿದ್ದಾರೆ. ಪ್ರಧಾನಿ ಹುದ್ದೆಯ ಆಮಿಷ ಒಡ್ಡಿರುವ ಹೇಳಿಕೆಯನ್ನು ಕಾಂಗ್ರೆಸ್ ನಿರಾಕರಿಸಿದೆ.