ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾಗಿ ಮೊದಲ ಬಾರಿಗೆ ಟ್ರಿನಿಡಾಡ್ ಮತ್ತು ಟೊಬಾಗೋಗೆ ಭೇಟಿ ನೀಡಿದ್ದಾರೆ. ಮೋದಿಯವರನ್ನು ಸರಳ, ಸಜ್ಜನ ವ್ಯಕ್ತಿ ಎಂದು ಉಕ್ಕಿನ ಉದ್ಯಮಿ ಎಂಎಲ್ ಮಿತ್ತಲ್ ಕೊಂಡಾಡಿದ್ದಾರೆ.
ಹೌದು, 27 ವರ್ಷಗಳ ಹಿಂದೆ ಅಂದರೆ 1998ರಲ್ಲಿ ಪ್ರಧಾನಿ ಮೋದಿ ಟ್ರಿನಿಡಾಡ್ನಲ್ಲಿರುವ ತಮ್ಮ ಮನೆಯಲ್ಲಿ ಉಳಿದುಕೊಂಡಿದ್ದ ವಿಚಾರದ ಕುರಿತು ಮಿತ್ತಲ್ ಮಾತನಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ಟ್ರಿನಿಡಾಡ್‌ನ ಪೋರ್ಟ್-ಆಫ್-ಸ್ಪೇನ್‌ನಲ್ಲಿ ನಡೆದ ವಿಶ್ವ ಹಿಂದೂ ಸಮ್ಮೇಳನದಲ್ಲಿ ಭಾಗವಹಿಸಲು ಬಂದಿದ್ದರು. ಆ ಭೇಟಿಯನ್ನು ನೆನಪಿಸಿಕೊಂಡಿರುವ ಉದ್ಯಮಿ ಮಿತ್ತಲ್ ಮೋದಿಯವರ ಸ್ವಭಾವದ ಬಗ್ಗೆ ಮಾತನಾಡಿದ್ದಾರೆ.
ಮಿತ್ತಲ್ ಅವರ ಮನೆಗೆ ಭೇಟಿ ನೀಡಿದ್ದಾಗ ಅವರು ಮಾಸ್ಟರ್ ಬೆಡ್ರೂಮ್ನಲ್ಲಿ ಮಲಗುವಂತೆ ಮೋದಿಯವರನ್ನು ಕೇಳಿಕೊಂಡಿದ್ದರಂತೆ, ಅಥವಾ ಹೋಟೆಲ್ ವ್ಯವಸ್ಥೆ ಮಾಡುವುದಾಗಿಯೂ ಹೇಳಿದ್ದರು. ಆದರೆ ಮೋದಿ ಮನೆಯಲ್ಲಿರುವ ಸಣ್ಣ ಕೋಣೆಯನ್ನು ಆರಿಸಿಕೊಂಡಿದ್ದರು. ಅದೇ ಮೋದಿ ಸರಳತೆಗೆ ಒಂದು ಉದಾಹರಣೆ ಎಂದು ಹೇಳಿದ್ದಾರೆ.
ಬೆಳಗ್ಗೆ 5 ಗಂಟೆಗೆ ಎದ್ದು, ಸಿಬ್ಬಂದಿ ಬರುವ ಮೊದಲೇ ತಾವೇ ಚಹಾ ಮಾಡಿ, ಎಲ್ಲರಿಗೂ ಉಪಾಹಾರ ಸಿದ್ಧಪಡಿಸಿದ್ದರು ಎಂದು ಮಿತ್ತಲ್ ಹೇಳುತ್ತಾರೆ. ಆ ಸಮಯದಲ್ಲಿ ಯಾವುದೇ ನಾಯಕರಲ್ಲಿ ಕಾಣದ ಶಿಸ್ತು ಮತ್ತು ನಮ್ರತೆ ಇವರಲ್ಲಿ ಕಂಡಿದ್ದೆ. ಮೋದಿ ಒಂದು ಸಣ್ಣ ಹಾಸಿಗೆ, ಬಾಟಲಿ ಮತ್ತು ಅದೇ ಸರಳ ಜೀವನ, ಸಾಧಾರಣ ವಸತಿಗೃಹದಲ್ಲಿ ವಾಸಿಸುತ್ತಿರುವುದನ್ನು ನೋಡಿ ಬೆರಗಾಗಿದ್ದೆ ಎಂದು ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ.