ನನ್ನ ಪ್ರಕಾರ ರಾಜ್ಯಪಾಲರೇ ರಾಜೀನಾಮೆ ನೀಡಬೇಕು: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಸದ್ಯ ಈ ವಿಚಾರವಾಗಿ ಸಿಎಂ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ಮಾಡಿದ್ದು, ರಾಜ್ಯಪಾಲರ ನಿರ್ಣಯವನ್ನ ಸಂಪುಟ ಸಭೆ ಖಂಡಿಸಿದೆ.

ಬಳಿಕ ಮಾತನಾಡಿದ ಸಿದ್ದರಾಮಯ್ಯ, ನಾನು ಯಾವ ಕಾರಣಕ್ಕೆ ರಾಜೀನಾಮೆಯನ್ನು ನೀಡಬೇಕು? ಯಾವ ಆಧಾರದ ಮೇಲೆ ನೀಡಬೇಕು? ನನ್ನ ಪ್ರಕಾರ ರಾಜ್ಯಪಾಲರೇ ರಾಜೀನಾಮೆಯನ್ನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸಂಪುಟ ಸಭೆ ಬಳಿಕ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​ ಜಂಟಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರ ನಿರ್ಧಾರಕ್ಕೆ ಕಾನೂನಿನ ಬಲ ಇಲ್ಲ. ಸಂವಿಧಾನದ ಪ್ರತಿನಿಧಿಗಳಾಗಿ ಅವರು ಕೆಲಸ ಮಾಡಬೇಕೇ ಹೊರತು ಬಿಜೆಪಿ ಪ್ರತಿನಿಧಿಯಾಗಿ ಕೆಲಸ ಮಾಡಬಾರದು. ನನ್ನ ಮೇಲೆ ಯಾಕೆ ರಾಜ್ಯಪಾಲರನ್ನ ಬಳಸಿಕೊಳ್ಳುತ್ತಿದ್ದಾರೆ? ರಾಜ್ಯಪಾಲರ ನಿರ್ಧಾರ ವಿರುದ್ಧ ನಾವು ಕೂಡ ಕಾನೂನು ಹೋರಾಟ ಮಾಡುತ್ತೇವೆ ಎಂದಿದ್ದಾರೆ.

ರಾಜ್ಯಪಾಲರು ಕಾನೂನು ಬಾಹಿರವಾಗಿ ಅನುಮತಿಸಿದ್ದಾರೆ. ಅವರು ಅನುಮತಿ ನೀಡಿದ್ದು ಕೂಡ ನಿಯಮದಲ್ಲಿ ಇಲ್ಲ. ಪ್ರಾಸಿಕ್ಯೂಷನ್​​ಗೆ ಅನುಮತಿ ನೀಡುವಾಗ ಕೇಂದ್ರ ಸರ್ಕಾರದ ಎಸ್​ಓಪಿ ಪಾಲಿಸಿಲ್ಲ. ನಮ್ಮ ಸರ್ಕಾರ ಬಡವರ ಪರ ಇರುವಂತಹ ಸರ್ಕಾರ. ಬಿಜೆಪಿಯವರು ಗ್ಯಾರಂಟಿಗಳ ವಿರುದ್ಧವಿದ್ದಾರೆ. ನಾವು ನುಡಿದಂತೆ ನಡೆದಿದ್ದೇವೆ, ಬಡವರ ಪರ ಕೆಲಸ ಮಾಡುತ್ತಿದ್ದೇವೆ. ನನ್ನ ರಾಜಕೀಯವಾಗಿ ತೇಜೋವಧೆ ಮಾಡಲು ಅವರ ಈ ಪ್ರಯತ್ನ ಯಶಸ್ವಿಯಾಗಲ್ಲ. ನನ್ನ ತೇಜೋವಧೆ ಮಾಡುವುದು ಬಿಜೆಪಿಯವರ ಭ್ರಮೆ. ನಮ್ಮ ಅಭೂತಪೂರ್ವ ಗೆಲುವು ಅವರಿಗೆ ಸಹಿಸಲು ಆಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ನಾವು ಬಡವರ ಪರ ಇದ್ದೇವೆಂದು ಟಾರ್ಗೆಟ್​ ಮಾಡುತ್ತಿದ್ದಾರೆ. ರಾಜ್ಯಪಾಲರು ಈ ರೀತಿ ಮಾಡುತ್ತಾರೆಂದು ನಮಗೆ ಗೊತ್ತಿತ್ತು. ಇದರಿಂದ ನಾವು ಇನ್ನೂ ಗಟ್ಟಿಯಾಗುತ್ತಿದ್ದೇವೆ. ಇದರಿಂದ ಬಿಜೆಪಿ-ಜೆಡಿಎಸ್​​ನವರು ಬಯಲಿಗೆ ಬರುತ್ತಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ಟಿಬಿ ಅಬ್ರಹಾಂ ದೂರು ನೀಡಿದ ಕೆಲ ಗಂಟೆಗಳಲ್ಲೇ ನನಗೆ ರಾಜ್ಯಪಾಲರ ಕಚೇರಿಯಿಂದ ಶೋಕಾಸ್ ನೋಟಿಸ್​ ನೀಡಲಾಗಿದೆ. ಲೋಕಾಯುಕ್ತದವರು ಹೆಚ್​ಡಿ ಕುಮಾರಸ್ವಾಮಿ, ಜೊಲ್ಲೆ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರ ಅನುಮತಿ ಕೋರಿದ್ದರು. ಹೆಚ್​ಡಿಕೆ ವಿರುದ್ಧ ಪ್ರಾಥಮಿಕ ತನಿಖೆಯಲ್ಲಿ ಸಾಬೀತು ಎಂದು ಮನವಿ ಮಾಡಿದ್ದರು. ಆದರೆ ಮುಡಾ ಕೇಸ್​ನಲ್ಲಿ ನನ್ನ ತನಿಖೆಯೇ ನಡೆದಿಲ್ಲ ಎಂದರು.

ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಇತರೆ ಸಚಿವರಿಗೆ ಧನ್ಯವಾದ ತಿಳಿಸುತ್ತೇನೆ. ಇಡೀ ಸಚಿವ ಸಂಪುಟ ಒಕ್ಕೊರಲಿನಿಂದ ಇದನ್ನ ಖಂಡಿಸಿದೆ. ಪಕ್ಷವೂ ಕೂಡ ಇದನ್ನ ಖಂಡಿಸಿದೆ. ಪಕ್ಷದ ಕಾರ್ಯಕರ್ತರು ಹಾಗೂ ಶಾಸಕರು ಖಂಡಿಸಿದ್ದಾರೆ. ಪಕ್ಷ ಹೈಕಮಾಂಡ್​ ಕೂಡ ನನಗೆ ಧೈರ್ಯ ತುಂಬಿದೆ. ನಿಮ್ಮ ಜೊತೆಗೆ ಇರುತ್ತೇವೆ ಎಂದು ಕರೆ ಮಾಡಿ ಹೇಳಿದ್ದಾರೆ. ಹಾಗಾಗಿ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!