ಹೊಸದಿಗಂತ ಡಿಜಿಟಲ್ ಡೆಸ್ಕ್:
ನವೆಂಬರ್ 19, 2023 ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಡೀ ದೇಶವೇ ಸಂಭ್ರಮಿಸಲು ಸಜ್ಜಾಗಿತ್ತು. ಸತತ 10 ಪಂದ್ಯಗಳನ್ನು ಗೆದ್ದು ಅಜೇಯವಾಗಿ ಮುನ್ನುಗ್ಗಿದ್ದ ಟೀಂ ಇಂಡಿಯಾ, ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಎಡವಿತು. ಆ ಒಂದು ಸೋಲು ಕೋಟ್ಯಂತರ ಭಾರತೀಯರ ಹೃದಯ ಒಡೆದಿದ್ದು ಮಾತ್ರವಲ್ಲದೆ, ನಾಯಕ ರೋಹಿತ್ ಶರ್ಮಾ ಅವರ ಕ್ರಿಕೆಟ್ ಬದುಕಿನ ಮೇಲೆಯೇ ಕರಿನೆರಳು ಬೀರಲಿತ್ತು.
ಇತ್ತೀಚೆಗೆ ‘ಮಾಸ್ಟರ್ಸ್ ಯೂನಿಯನ್’ ಕಾರ್ಯಕ್ರಮದಲ್ಲಿ ಮಾತನಾಡಿದ ರೋಹಿತ್ ಶರ್ಮಾ, ಆ ಸೋಲಿನ ನಂತರದ ಮಾನಸಿಕ ಸಂಘರ್ಷವನ್ನು ಹಂಚಿಕೊಂಡಿದ್ದಾರೆ. “2023ರ ವಿಶ್ವಕಪ್ ಸೋಲಿನ ನಂತರ ನನ್ನಲ್ಲಿ ಏನೂ ಉಳಿದಿಲ್ಲ ಎನಿಸಿತ್ತು. ಆ ಕ್ಷಣದಲ್ಲಿ ಕ್ರಿಕೆಟ್ ಜೀವನಕ್ಕೇ ವಿದಾಯ ಹೇಳುವ ಆಲೋಚನೆ ಬಂದಿತ್ತು. ನಾನು ಸಂಪೂರ್ಣವಾಗಿ ಕುಸಿದುಹೋಗಿದ್ದೆ,” ಎಂದು ಅವರು ಭಾವುಕರಾಗಿ ನುಡಿದಿದ್ದಾರೆ. ತಂಡವನ್ನು ಗೆಲ್ಲಿಸುವುದೇ ಏಕೈಕ ಗುರಿಯಾಗಿದ್ದ ರೋಹಿತ್‌ಗೆ ಆ ಸೋಲಿನಿಂದ ಚೇತರಿಸಿಕೊಳ್ಳಲು ಬರೋಬ್ಬರಿ ಎರಡು ತಿಂಗಳು ಬೇಕಾಯಿತು.
ಆದರೆ, “ಜೀವನ ಅಲ್ಲಿಗೆ ಮುಗಿಯುವುದಿಲ್ಲ” ಎಂಬ ಸತ್ಯವನ್ನರಿತ ಹಿಟ್‌ಮ್ಯಾನ್, ತನ್ನ ಶಕ್ತಿಯನ್ನು ಮತ್ತೆ ಕ್ರೋಢೀಕರಿಸಿಕೊಂಡರು. “ಟಿ20 ವಿಶ್ವಕಪ್‌ನಲ್ಲಿ ನನಗಾಗಿ ಬೇರೇನೋ ಕಾದಿದೆ ಎಂಬ ನಂಬಿಕೆ ಇತ್ತು,” ಎಂದು ಅವರು ಹೇಳಿದ್ದಾರೆ. ಅದರಂತೆ, 2024ರಲ್ಲಿ ವೆಸ್ಟ್ ಇಂಡೀಸ್ ಮಣ್ಣಿನಲ್ಲಿ ಟಿ20 ವಿಶ್ವಕಪ್ ಎತ್ತಿ ಹಿಡಿಯುವ ಮೂಲಕ ರೋಹಿತ್ ತಮ್ಮ ಕನಸನ್ನು ನನಸು ಮಾಡಿಕೊಂಡರು. 2023ರ ಆ ಕಣ್ಣೀರು 2024ರ ಮುತ್ತಿನಂತ ಹನಿಗಳಾಗಿ ಸಂಭ್ರಮ ತಂದವು.
ಈಗಾಗಲೇ ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ರೋಹಿತ್ ಶರ್ಮಾ, ಪ್ರಸ್ತುತ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಮುಂದುವರಿಯುತ್ತಿದ್ದಾರೆ. 2023ರಲ್ಲಿ ತಪ್ಪಿದ ಏಕದಿನ ವಿಶ್ವಕಪ್ ಕನಸನ್ನು 2027ರಲ್ಲಿ ನನಸು ಮಾಡಿಕೊಳ್ಳುವ ಛಲ ಅವರಲ್ಲಿದೆ. ಸೋಲನ್ನು ಮೆಟ್ಟಿ ನಿಂತು ಹೊಸ ಇತಿಹಾಸ ಬರೆದ ರೋಹಿತ್ ಶರ್ಮಾ ಅವರ ಈ ಪಯಣ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ.

