March 22, 2026
Sunday, March 22, 2026
spot_img

ನಿಮ್ಮ ಜೊತೆ ನಟಿಸುವ ಆಸೆಯಿದೆ: ರಿಷಬ್ ಶೆಟ್ಟಿ ಮುಂದೆ ಮನದಾಸೆ ಬಿಚ್ಚಿಟ್ಟ ಕಾಲಿವುಡ್ ಸೂಪರ್ ಸ್ಟಾರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಭಾರತದ ಖ್ಯಾತ ನಟ, ‘ಮಕ್ಕಳ್ ಸೆಲ್ವನ್’ ಎಂದೇ ಪ್ರಖ್ಯಾತರಾದ ವಿಜಯ್ ಸೇತುಪತಿ ಅವರು ಕನ್ನಡದ ‘ಡಿವೈನ್ ಸ್ಟಾರ್’ ರಿಷಬ್ ಶೆಟ್ಟಿ ಅವರ ಅಭಿನಯ ಹಾಗೂ ನಿರ್ದೇಶನಕ್ಕೆ ಮಾರುಹೋಗಿದ್ದಾರೆ. ಇತ್ತೀಚೆಗೆ ನಡೆದ ‘ಗಲಾಟ ಗ್ಲೋರಿಯಸ್ ಐಕಾನ್ಸ್’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಇಬ್ಬರು ನಟರು ವೇದಿಕೆ ಹಂಚಿಕೊಂಡಿದ್ದು, ವಿಜಯ್ ಸೇತುಪತಿ ಅವರು ರಿಷಬ್ ಶೆಟ್ಟಿ ಅವರೊಂದಿಗೆ ನಟಿಸುವ ಇಚ್ಛೆಯನ್ನು ಬಹಿರಂಗಪಡಿಸಿದ್ದಾರೆ.

ವೇದಿಕೆಯ ಮೇಲೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿಜಯ್ ಸೇತುಪತಿ, “ನಾನು ‘ಕಾಂತಾರ’ ಸಿನಿಮಾ ನೋಡಿ ಬೆರಗಾದೆ. ಆ ಕೂಡಲೇ ರಿಷಬ್ ಅವರಿಗೆ ಕರೆ ಮಾಡಿದ್ದೆ. ಆ ಸಿನಿಮಾ ಅಷ್ಟು ಅದ್ಭುತವಾಗಿ ಮೂಡಿಬರಲು ರಿಷಬ್ ಅವರ ಜೀವನದ ಅನುಭವಗಳೇ ಕಾರಣ. ಕೇವಲ ವೇದಿಕೆ ಮೇಲಿದ್ದೇನೆ ಎಂಬ ಕಾರಣಕ್ಕೆ ಈ ಮಾತು ಹೇಳುತ್ತಿಲ್ಲ, ನಿಜವಾಗಿಯೂ ನಿಮ್ಮ ಸಿನಿಮಾದಲ್ಲಿ ಅಥವಾ ನಿಮ್ಮ ಜೊತೆ ಕೆಲಸ ಮಾಡುವ ದೊಡ್ಡ ಆಸೆ ನನಗಿದೆ” ಎಂದು ಮನದಾಳದ ಮಾತನ್ನು ಹಂಚಿಕೊಂಡರು.

ತಮ್ಮ ಮತ್ತು ರಿಷಬ್ ಅವರ ಸಿನಿ ಪಯಣದ ಬಗ್ಗೆ ಮಾತನಾಡಿದ ವಿಜಯ್, “ನಾನು ಮತ್ತು ರಿಷಬ್ ಇಬ್ಬರೂ 2004ರಲ್ಲೇ ನಟನಾ ವೃತ್ತಿ ಆರಂಭಿಸಿದೆವು. ನೀವು ಸಿನಿಮಾದ ಎಲ್ಲಾ ವಿಭಾಗಗಳನ್ನು ಕಲಿತು ಇಂದು ಯಶಸ್ವಿ ಆಗಿದ್ದೀರಿ. ನಿಮ್ಮ ಕೈಯಿಂದ ಪ್ರಶಸ್ತಿ ಪಡೆಯುತ್ತಿರುವುದು ನನಗೆ ಹೆಮ್ಮೆಯ ವಿಷಯ” ಎಂದು ಶ್ಲಾಘಿಸಿದರು.

ವಿಜಯ್ ಸೇತುಪತಿ ಅವರ ಮಾತಿಗೆ ಧನಾತ್ಮಕವಾಗಿ ಸ್ಪಂದಿಸಿದ ರಿಷಬ್ ಶೆಟ್ಟಿ, “ವಿಜಯ್ ಸರ್ ಕಾಂತಾರ ನೋಡಿ ನನಗೆ ಫೋನ್ ಮಾಡಿ ಇಂಗ್ಲಿಷ್‌ನಲ್ಲಿ ಮಾತನಾಡಲು ಶುರು ಮಾಡಿದರು. ಆದರೆ ನಾನು ತಮಿಳಿನಲ್ಲೇ ಉತ್ತರಿಸಿದೆ. ಅವರ ತಂಡದ ಕಾರ್ತಿಕ್ ಸುಬ್ಬರಾಜು ಸೇರಿದಂತೆ ಹಲವರು ನನಗೆ ಮೊದಲೇ ಪರಿಚಯ. ವಿಜಯ್ ಸರ್ ಮತ್ತು ನನ್ನ ಜರ್ನಿ ಒಂದೇ ರೀತಿ ಇದೆ. ವಡಿವೇಲು ಅವರ ಕಾಮಿಡಿ ಡೈಲಾಗ್ ರೀತಿ ಹೇಳಬೇಕೆಂದರೆ ‘ವೈ ಬ್ಲಡ್? ಸೇಮ್ ಬ್ಲಡ್’ (ನಮ್ಮಿಬ್ಬರ ಹಾದಿ ಒಂದೇ)” ಎಂದು ಸಂಭ್ರಮದಿಂದ ನುಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !