January22, 2026
Thursday, January 22, 2026
spot_img

ಕುಮಾರಸ್ವಾಮಿ ಅವರಿಗೂ ಲಾಯಲ್ ಆಗಿದ್ದೆ.. ನನ್ನ ನಿಷ್ಠೆ ದೇವರಿಗೆ ಗೊತ್ತು: ಹೀಗ್ಯಾಕಂದ್ರು ಡಿಕೆಶಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗಿನ ಸಂಬಂಧದ ಕುರಿತು ನಡೆಯುತ್ತಿದ್ದ ಊಹಾಪೋಹಗಳಿಗೆ ಮತ್ತೆ ತೆರೆ ಎಳೆದಿದ್ದಾರೆ. ತಮ್ಮ ಮತ್ತು ಮುಖ್ಯಮಂತ್ರಿಗಳ ನಡುವೆ ಯಾವತ್ತೂ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ತಮ್ಮ ವಿರುದ್ಧ ಗುಂಪುಗಾರಿಕೆಯ ಆರೋಪಗಳನ್ನು ತಳ್ಳಿಹಾಕಿದರು. “ನಾನಂತೂ ಗುಂಪು ಮಾಡೋಕೆ ಯಾವತ್ತೂ ಹೋಗಲ್ಲ” ಎಂದು ಮತ್ತೆ ಒಗ್ಗಟ್ಟಿನ ಮಂತ್ರ ಜಪಿಸಿದರು.

ಇತ್ತೀಚೆಗೆ ತಾವು ದೆಹಲಿಗೆ ತೆರಳಿದ್ದ ಸಂದರ್ಭವನ್ನು ಉಲ್ಲೇಖಿಸಿ ಮಾತನಾಡಿದ ಡಿಕೆಶಿ, ಗುಂಪುಗಾರಿಕೆ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತ್ಯುತ್ತರ ನೀಡಿದರು. “ನಾನು ಡೆಲ್ಲಿಗೆ ಹೋಗಿದ್ದೆ, ಆದ್ರೆ ಒಬ್ಬ ಶಾಸಕರನ್ನೂ ನನ್ನ ಜೊತೆ ಕರ್ಕೊಂಡು ಹೋಗಿಲ್ಲ. ಕರಕೊಂಡು ಹೋಗಬಹುದಾಗಿತ್ತು, ಅದೇನು ದೊಡ್ಡ ಕೆಲಸ ಅಲ್ಲ. ಆದರೆ ಕರ್ಕೊಂಡು ಹೋಗಲಿಲ್ಲ. ನಾನು ಎಂಟು ಹತ್ತು ಜನರನ್ನ ಹಾಕಿಕೊಂಡು ಹೋಗಬಹುದು, ಅದರಿಂದ ಏನೂ ಪ್ರಯೋಜನ ಆಗಲ್ಲ” ಎಂದು ಹೇಳುವ ಮೂಲಕ, ತಮ್ಮ ಪ್ರಯಾಣದಲ್ಲಿ ರಾಜಕೀಯ ಉದ್ದೇಶವಿರಲಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

“ಎಷ್ಟು ನಿಷ್ಠೆಯಿಂದ ಕೆಲಸ ಮಾಡಿದ್ದೇನೆ ಎಂದು ನನಗೆ, ನನ್ನ ಆತ್ಮಸಾಕ್ಷಿಗೆ ಗೊತ್ತು, ದೇವರಿಗೆ ಮಾತ್ರ ಗೊತ್ತು” ಎಂದು ತಮ್ಮ ಕರ್ತವ್ಯ ನಿಷ್ಠೆಯನ್ನು ಬಲವಾಗಿ ಪ್ರತಿಪಾದಿಸಿದರು.

ಕುಮಾರಸ್ವಾಮಿ ಸರ್ಕಾರಕ್ಕೂ ನನ್ನ ನಿಷ್ಠೆ ಇತ್ತು

ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯ ತಮ್ಮ ಕಾರ್ಯವೈಖರಿಯನ್ನು ನೆನಪಿಸಿಕೊಂಡ ಡಿಸಿಎಂ, “ಕುಮಾರಸ್ವಾಮಿ ಸರ್ಕಾರ ಇದ್ದಾಗಲೂ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಕುಮಾರಸ್ವಾಮಿ ಒಪ್ಪದೆ ಇರಬಹುದು. ಆದ್ರೆ ಕುಮಾರಸ್ವಾಮಿ ಅವರಿಗೂ ಲಾಯಲ್ ಆಗಿ ಇದ್ದೆ. ಸರ್ಕಾರ ಉಳಿಸಬೇಕು ಎಂದು ನಿಷ್ಠೆಯಿಂದ ಕೆಲಸ ಮಾಡಿದ್ದೇನೆ ಅನ್ನೋದು ಅವರ ತಂದೆ ಅವರಿಗೂ ಗೊತ್ತು” ಎಂದು ವಿವರಿಸಿದರು.

ಸದ್ಯ ತಮ್ಮ ವಿರುದ್ಧ ಟೀಕೆ ಮಾಡುತ್ತಿರುವವರಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ ಡಿಕೆಶಿ, “ಈಗ ಅವರು ಏನು ಬೇಕಾದರೂ ಮಾತಾಡಿಕೊಳ್ಳಲಿ, ಅದಕ್ಕೆ ನನಗೆ ಬೇಸರ ಇಲ್ಲ. ನನ್ನ ಬದುಕು ಆ ರೀತಿಯಾಗಿದೆ. ಆದ್ರೆ ನಾನು ಯಾವತ್ತೂ ಬ್ಯಾಕ್ ಸ್ಟಾಬ್ ಮಾಡೋನು ಅಲ್ಲಾ. ಏನೇ ಇದ್ದರೂ ನೇರಾನೇರ ಫೈಟ್ ಮಾಡೋನು” ಎಂದು ತಮ್ಮ ರಾಜಕೀಯ ಶೈಲಿಯನ್ನು ಬಲವಾಗಿ ಸಮರ್ಥಿಸಿಕೊಂಡರು.

Must Read