ನೀವು ಪೀಠಕ್ಕೆ ಹೋಗಿ ಎಂದರೇ ಹೋಗುತ್ತೇನೆ, ಇಲ್ಲದಿದ್ದರೇ ಭಕ್ತರ ಮನೆಯಲ್ಲಿರುತ್ತೇನೆ: ಮೃತ್ಯುಂಜಯ ಸ್ವಾಮೀಜಿ ಭಾವುಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಬೀಗ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಪಂಚಮಸಾಲಿ ಸಮುದಾಯದ ಮುಖಂಡರ ಜೊತೆಗೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಂಗಳವಾರ (ಜು.15) ಸಭೆ ನಡೆಸಿದರು.

ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಸ್ವಾಮೀಜಿ, ಸಮಾಜಕ್ಕೆ 2ಎ ಮೀಸಲಾತಿ ಕೊಡಿಸುವವರೆಗೂ ಪೀಠಕ್ಕೆ ಬರಲ್ಲ ಎಂದು ಪ್ರತಿಜ್ಞೆ ಮಾಡಿದ್ದೆ. ಅದರಂತೆ ರಾಜ್ಯಾದ್ಯಂತ ಸುತ್ತಿ ಸಮುದಾಯವನ್ನು ಸಂಘಟಿಸಿ. ಮೀಸಲಾತಿಗೆ ಆಗ್ರಹಿಸುವ ಕೆಲಸ‌ ಮಾಡಿದ್ದೇನೆ ಎಂದು ಕಣ್ಣೀರು ಹಾಕಿದರು.

ಪೀಠಕ್ಕೆ ಬೀಗ ಹಾಕಿದ ಸುದ್ದಿ ತಿಳಿದು ಮನಸ್ಸಿಗೆ ನೋವಾಗಿದೆ. ಹೀಗಾಗಿ, ಇಂದು ಹುನಗುಂದದ ಬಸವ ಮಂಟಪಕ್ಕೆ ಬಂದೆ. ಮುಖಂಡರು ಹೇಗೆ ಹೇಳುತ್ತಾರೆ ಹಾಗೆ ಮುನ್ನಡೆಯುತ್ತೇನೆ. ಭಕ್ತರು ಪೀಠಕ್ಕೆ ಹೋಗಿ ಎಂದರೇ ಪೀಠಕ್ಕೆ ಹೋಗುತ್ತೇನೆ. ಇಲ್ಲದಿದ್ದರೇ ಭಕ್ತರ ಮನೆಯಲ್ಲಿರುತ್ತೇನೆ ಎಂದು ಭಾವುಕರಾದರು. ಸಭೆಯಲ್ಲಿ ಪೀಠಕ್ಕೆ‌ ಬೀಗ ಹಾಕಿದ ಬಗ್ಗೆ, ಎಫ್​ಐಆರ್ ದಾಖಲಾದ ಬಗ್ಗೆ ಚರ್ಚೆ ನಡೆದಿದ್ದು, ಮುಂದೆ ಏನು ಮಾಡಬೇಕೆಂದು ತೀರ್ಮಾನ ತೆಗೆದುಕೊಂಡರು.

ಬೀಗ ಜಡಿಯಲು ಕಾರಣವೇನು?
ಹುನಗುಂದ ಶಾಸಕ ವಿಜಯಾನಂದ್ ಕಾಶಪ್ಪನವರ್ ಹಾಗೂ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಧ್ಯೆ ನಡೆಯುತ್ತಿರುವ ಮುಸುಕಿನ ಗುದ್ದಾಟದಿಂದ ಹುನಗುಂದ ತಾಲೂಕಿನಲ್ಲಿರುವ ಕೂಡಲಸಂಗಮ ಪಂಚಮಸಾಲಿ ಗುರು ಪೀಠಕ್ಕೆ ಬೀಗ ಜಡಿಯಲಾಗಿದೆ. ಪಂಚಮಸಾಲಿ 2ಎ ಮೀಸಲಾತಿ ಹೋರಾಟದಲ್ಲಿ ಒಡಕು ಮೂಡ್ತಿದ್ದಂತೆ, ಶಾಸಕ ಕಾಶಪ್ಪನವರ ಹಾಗೂ ಸ್ವಾಮೀಜಿ ಸಂಬಂಧಲ್ಲಿ ಬಿರುಕು ಮೂಡಿತ್ತು. ಶಾಸಕ ಕಾಶಪ್ಪನವರ್ ಅಖಿಲ ಭಾರತ ಪಂಚಮಸಾಲಿ ಟ್ರಸ್ಟ್‌ನ ಅಧ್ಯಕ್ಷರಾದ ನಂತರ ಸ್ವಾಮೀಜಿ ಗುರುಪೀಠಕ್ಕೆ ಬರುವುದು ಅಪರೂಪವಾಗಿತ್ತು.

ಪೀಠದ ಆವರಣದಲ್ಲಿ ರಾತ್ರಿ ಸಮಯದಲ್ಲಿ ಬೇರೆ ರೀತಿಯ ಚಟುವಟಿಕಗಳು ನಡೆಯುತ್ತಿವೆ ಎಂಬ ಆರೋಪದ ಮೇಲೆ ಕಾಶಪ್ಪನವರ ಅಣತಿಯಂತೆ ಪೀಠಕ್ಕೆ ಬೀಗ ಜಡಿಯಲಾಗಿತ್ತು. ಬೀಗ ಜಡಿದ ನಂತರ ಸ್ವಾಮೀಜಿಯವರ ಕೆಲ ಬೆಂಬಲಿಗರು ಪೀಠದ ಬೀಗ ಮುರಿದಿದ್ದಾರೆ ಎಂದು ಕಾಶಪ್ಪನವರ ಬೆಂಬಲಿಗ ಚಂದ್ರಶೇಖರ ಚಿತ್ತರಗಿ ಅವರು ಹುನಗುಂದ ಪೊಲೀಸ್ ಠಾಣೆಯಲ್ಲಿ 7 ಜನರ ವಿರುದ್ಧ ದೂರು ದಾಖಲಿಸಿದ್ದರು. ಈ ಸಂಬಂಧ ಎಫ್‌ಐಆರ್‌ ದಾಖಲಾಗಿದೆ. ಅಕ್ರಮವಾಗಿ ಕೀ ಮುರಿದು ಒಳಗಡೆ ಹೋಗಿ, ಮುಖ್ಯ ಗೇಟ್, ಮಠದ ಮರದ ಬಾಗಿಲು ಒಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಸದ್ಯ ಈಗ ಬೀಗ ಜಡಿದ ಪೀಠದ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!