ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೋದಿ (Narendra Modi) ಅವರು ಬೆನ್ನ ಮೇಲೆ ಗುದ್ದಿದ ಭಾರ ನನ್ನ ಮೇಲಿದೆ. ಶಾಸಕನಾಗುವುದಕ್ಕಿಂತ ಮೋದಿ ಅಂತಹವರ ಪ್ರೀತಿ ನನಗೆ ಮುಖ್ಯ ಎಂದು ಬಿಜೆಪಿ ಶಾಸಕ ಎಸ್.ಎ. ರಾಮದಾಸ್ ಹೇಳಿದ್ದಾರೆ.
ಬಿಜೆಪಿಯಿಂದ ಟಿಕೆಟ್ ತಪ್ಪಿದ ಹಿನ್ನೆಲೆ ಅಸಮಾಧಾನಗೊಂಡಿರುವ ಅವರು,ಬೆಂಬಲಿಗರೊಂದಿಗೆ ನಿರ್ಣಾಯಕ ಸಭೆ ನಡೆಸಿ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದ್ದಾರೆ. ಕಳೆದ ಮೂರು ದಿನಗಳಿಂದ ಕ್ಷೇತ್ರದಲ್ಲಿ ಸರ್ವೆ ಮಾಡಿಸಿದ್ದೇನೆ.ವರದಿ ಕೂಡ ಬಂದಿದೆ. ಸರ್ವೇ ವರದಿ ಪ್ರಕಾರ ನಾನು ಪಕ್ಷೇತರನಾಗಿ ಸ್ಪರ್ಧಿಸಿದರೂ 10 ರಿಂದ 12 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ. ಆದರೆ, ನಾನು ಪಕ್ಷದ ವಿರುದ್ಧ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ.
ನಿಮ್ಮ ಶಾಸಕ ನಿಮ್ಮ ಮನೆಯಲ್ಲಿ ಇರುತ್ತಾನೆ. ನಮ್ಮ ಗೌರವದ ಜೊತೆ ಅಮ್ಮನ ಪಕ್ಷದ ಗೌರವವೂ ದೊಡ್ಡದಾಗಿರುತ್ತದೆ. ಕೆಆರ್ ಕ್ಷೇತ್ರದ ಟಿಕೆಟ್ ಘೋಷಣೆ ನಂತರದ ಬೆಳವಣಿಗೆ ಗಮನಿಸಿದ್ದೇನೆ. ಕ್ಷೇತ್ರದ ಕಾರ್ಯಕರ್ತರ ಪೈಕಿ ಶೇಕಡ 90ರಷ್ಟು ಜನ ನನ್ನ ಜೊತೆಗಿದ್ದಾರೆ. ಇನ್ನು ಮುಂದೆಯೂ ನಾನು ಕೈಗೊಳ್ಳುವ ನಿರ್ಧಾರಕ್ಕೆ ನೀವು ಬದ್ಧರಾಗಿರಬೇಕು .
ನಾನು ಬಿಜೆಪಿಯಲ್ಲಿ ಇರುವುದಾಗಿ ಬೆಂಬಲಿಗರ ಸಭೆಯಲ್ಲಿ ಘೋಷಣೆ ಮಾಡಿದ್ದಾರೆ.
ಮೋದಿ ಅವರು ಬೆನ್ನಮೇಲೆ ಗುದ್ದಿದ ಭಾರ ನನ್ನ ಮೇಲಿದೆ. ಮಂತ್ರಿ ಮಾಡದಿದ್ದರೂ ನಾನು ಪಕ್ಷದ ವಿರುದ್ಧ ಮಾತನಾಡಲಿಲ್ಲ. ನೋವಿನಲ್ಲೂ ಬಿಜೆಪಿಗಾಗಿ ಕೆಲಸ ಮಾಡಿದೆ. ಟಿಕೆಟ್ ಸಿಗಲಿಲ್ಲ ಅಂತಾ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಟಿಕೆಟ್ ಸಿಗದಿದ್ದರೂ ಪಕ್ಷಕ್ಕಾಗಿ ದುಡಿಯುತ್ತೇನೆ. ದ್ರೋಹ ಮಾಡುವುದನ್ನು ನಾನು ಕಲಿತಿಲ್ಲ. ಏಕೆಂದರೆ ಪಕ್ಷ ನನಗೆ ತಾಯಿ ಸಮಾನ. ನೋವುಂಟಾಗದಂತೆ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾಗುತ್ತೇನೆ. ಪಕ್ಷದ ಅಭ್ಯರ್ಥಿ ಪರವಾಗಿ ಮತಯಾಚಿಸುತ್ತೇನೆ. ನನಗೆ ಶಾಸಕ ಸ್ಥಾನ ಮುಖ್ಯವಲ್ಲ. ದೇಶದ ಪ್ರಧಾನಿ ಮುಖ್ಯ ಎಂದು ನುಡಿದಿದ್ದಾರೆ.