ಹೊಸದಿಗಂತ ವರದಿ, ಮೈಸೂರು:
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಎನ್ ಡಿಎ ಮೈತ್ರಿಕೂಟವೇ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿಯ ಹಿರಿಯ ಸಂಸದ ವಿ ಶ್ರೀನಿವಾಸ್ ಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದರು.
ಗುರುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರುವ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವೇ ಅಧಿಕಾರಕ್ಕೆ ಬರಲಿದೆ ಎಂಬ ಮಾತನ್ನ ಐಎನ್‌ಡಿಐಎ ಮೈತ್ರಿಕೂಟದ ನಾಯಕರೇ ಹೇಳುತ್ತಿದ್ದಾರೆ ಎಂದರು.
ನಾನು ೨೫ ವರ್ಷ ಕಾಲ ಕಾಂಗ್ರೆಸ್ ನಲ್ಲಿದ್ದವನು. ಮುಂದೊoದು ದಿನ ಕಾಂಗ್ರೆಸ್ ಗೆ ಇಂತಹ ದುಸ್ಥಿತಿ ಬರುತ್ತದೆ ಎಂದು ಊಹೆ ಕೂಡ ಮಾಡಿರಲಿಲ್ಲ.
ತುರ್ತು ಪರಿಸ್ಥಿತಿ ಬಳಿಕ ಕಾಂಗ್ರೆಸ್ ಗೆ ಪರ್ಯಾಯವಾಗಿ ಜನತಾ ಪಕ್ಷ ಉದಯವಾದರೂ ಅದು ಮುಂದೆ ಬೆಳೆಯಲಿಲ್ಲ. ಆದರೀಗ ಕಾಂಗ್ರೆಸ್‌ಗೆ ಪರ್ಯಾಯವಾಗಿ ಬಿಜೆಪಿ ದೊಡ್ಡ ಪಕ್ಷವಾಗಿ ಬೆಳೆದಿದೆ. ಪರಿಣಾಮ ಕಾಂಗ್ರೆಸ್ ದುಸ್ಥಿತಿಗೆ ತಲುಪಿದೆ. ಕಾಂಗ್ರೆಸ್‌ಗೆ ಇಂತಹ ದುಸ್ಥಿತಿ ಬರುತ್ತದೆಂದು ನಾನು ನಿರೀಕ್ಷಿಸಿರಲಿಲ್ಲ. ಕಾಂಗ್ರೆಸ್‌ನ ಅನೇಕ ನಾಯಕರಿಗೆ ಅವಕಾಶ ನೀಡಲಿಲ್ಲ. ಇವೆಲ್ಲವೂ ಕೂಡ ಇಂದು ಕಾಂಗ್ರೆಸ್‌ನ ದುಸ್ಥಿತಿಗೆ ಕಾರಣವಾಗಿದೆ ಎಂದರು.
ಬಿಜೆಪಿ ಪರವಾದ ವಾತಾವರಣ:
`ದೇಶದಲ್ಲಿ ಬಿಜೆಪಿ ಪರವಾದ ವಾತಾವರಣವಿದೆ. ಇದನ್ನು ರಾಜಕೀಯ ತಂತ್ರಗಾರಿಕೆ ರೂಪಿಸುವವರೂ ಹೇಳಿದ್ದಾರೆ. ಕಾಂಗ್ರೆಸ್‌ನಲ್ಲಿ ನಾಯಕರ ಕೊರತೆ ಇದೆ. ಇದ್ದ ನಾಯಕರನ್ನು ಕೆಟ್ಟದಾಗಿ ನಡೆಸಿಕೊಂಡು ಪಕ್ಷ ತೊರೆಯುವಂತೆ ಮಾಡಿದರು. ಈ ನಡುವೆ ಬಿಜೆಪಿ ಶ್ರೀರಾಮಮಂದಿರ ಮೊದಲಾದ ವಿಷಯಗಳನ್ನು ಇಟ್ಟುಕೊಂಡು ದೊಡ್ಡ ಪ್ರಮಾಣದಲ್ಲಿ ಬೆಳೆಯಿತು’ ಎಂದು ಹೇಳಿದರು. ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಿಶ್ವಾಸವಿದೆ. ಬಿಜೆಪಿಗೆ ಮತ ಹಾಕಬೇಕು ಎಂದು ಬಯಸುತ್ತಿದ್ದಾರೆ ಎಂದರು.
ನನ್ನ ಚುನಾವಣಾ ರಾಜಕೀಯಕ್ಕೆ೫೦ವರ್ಷ ತುಂಬಿದೆ, ಈ ಹಿನ್ನೆಲೆಯಲ್ಲಿ ಅಭಿಮಾನಿಗಳಿಂದ ಸುವರ್ಣ ಮಹೋತ್ಸವ ಆಚರಿಸುತ್ತಿದ್ದಾರೆ.
ಮಾರ್ಚ್ ೧೭ ರಂದು ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಘಟಿಕೋತ್ಸವ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜನೆ ªಮಾಡಲಾಗಿದೆ. ಈ ಕಾರ್ಯಕ್ರಮ ಕ್ಕೆ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿಗಳಾದ ಎಸ್ ಎಂ ಕೃಷ್ಣ, ವೀರಪ್ಪ ಮೋಯ್ಲಿ, ಡಾ ಚಂದ್ರಶೇಖರ್ ಕಂಬಾರ, ಕಾಗೋಡು ತಿಮ್ಮಪ್ಪ, ಪಿ,ಜಿ,ಆರ್ ಸಿಂಧ್ಯಾ ಸೇರಿ ಹಲವರು ಭಾಗವಹಿಸಲಿದ್ದಾರೆ.
ನಾನೇ ನನ್ನ ಸ್ವತಃ ಸ್ವಾಭಿಮಾನಿ ನೆನೆಪುಗಳು ಅಭಿಮಾನದ ಗ್ರಂಥ ಬರೆಯುತ್ತಿದ್ದೇನೆ. ಪಾರ್ಲಿಮೆಂಟ್‌ನಲ್ಲಿ ನನ್ನ ಮಾತುಗಳು ಸಾಧನೆಗಳು ಸೇರಿದಂತೆ ಎಲ್ಲಾ ವಿಚಾರಗಳನ್ನು ಕೂಡಾ ಬರೆಯುತ್ತೇನೆ ಎಂದು ತಿಳಿಸಿದರು. ನನ್ನ ಜೀವನದಲ್ಲಿ ೭ಜನ ಪ್ರಧಾನಿಗಳನ್ನು ನೋಡಿದ್ದೇನೆ,
ಇವರು ಎಲ್ಲಾರ ಆಡಳಿತ ವೈಖರಿಯನ್ನು ಮುಂದಿನ ದಿನಗಳಲ್ಲಿ ಪುಸ್ತಕ ಬರೆಯುತ್ತೇನೆ.ನನ್ನ ಜೀವಿತ ಅವಧಿಯಲ್ಲಿ ಸ್ವಾಭಿಮಾನದ ರಾಜಕೀಯ ಮಾಡಿದ್ದೇನೆ, ಒಳ್ಳೆಯ ಕೆಲಸ ಮಾಡಿದ ಆತ್ಮ ತೃಪ್ತಿ ಇದೆ. ಯಾವ ಪಕ್ಷಕ್ಕೆ ಹೋಗಿದ್ದರೂ ಕೂಡಾ ಯಾರಿಗೂ ಹೊರೆಯಾಗದಂತೆ ನಡೆದುಕೊಂಡಿದ್ದೇನೆ.ನನ್ನ ಪುಸ್ತಕದಲ್ಲಿ ಸಾಕಷ್ಟು ವಿಚಾರಗಳು ಇರಲಿವೆ ಎಂದು ತಿಳಿಸಿದರು.
ಇನ್ನು ಮುಂದೆ ಯಾವುದೇ ಚುನಾವಣೆಗೆ ನಿಲ್ಲುವುದಿಲ್ಲ, ಯಾವುದೇ ಪಕ್ಷದಲ್ಲೂ ಇರುವುದಿಲ್ಲ. ಬರುವ ಲೋಕಸಭೆ ಚುನಾವಣೆಯಲ್ಲಿ ಇಂಥವರಿಗೆ ಟಿಕೆಟ್ ಕೊಡಿ ಎನ್ನುವುದಿಲ್ಲ. `ನನ್ನಂತಹ ಅನುಭವ ಇರುವವನು, ಇಂಥವರಿಗೆ ಟಿಕೆಟ್ ಕೊಡಿ ಎಂದು ಕೇಳುವುದು ಸರಿಯಲ್ಲ. ನನ್ನ ಇಬ್ಬರು ಅಳಿಯಂದಿರು ಕೂಡ ಚಾಮರಾಜನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ನಮ್ಮದು ರಾಷ್ಟ್ರೀಯ ಪಕ್ಷ. ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಸರ್ವೇ ಮಾಡಿ ನಿರ್ಧರಿಸುತ್ತಾರೆ. `ನಮ್ಮ ಕುಟುಂಬದವರಿಗೆ ಟಿಕೆಟ್ ಕೊಡದಿದ್ದರೆ ಬೇಸರವೇನೂ ಆಗುವುದಿಲ್ಲ. ಹೈಕಮಾಂಡ್ ತೀರ್ವಾನವನ್ನು ಸಂತೋಷದಿoದ ಸ್ವಾಗತಿಸುತ್ತೇನೆ’ ಎಂದರು.
ನಾನೇನೂ ಅನುಭವವಿಲ್ಲದ ವ್ಯಕ್ತಿಯಲ್ಲ. ಬಾಮೈದನಿಗೆ ಕೊಡಿ,ಅಳಿಯನಿಗೆ ಕೊಡಿ ಅನ್ನಲಾಗದು. ಸಮೀಕ್ಷೆ ಮಾಡಿ ಯಾರ ಪರವಾಗಿ ಒಲವು ಇದೆ ಎಂಬುದನ್ನು ನೋಡಿ ಕೊಡುತ್ತಾರೆ. ನನ್ನ ಸಲಹೆಯನ್ನು ಕೇಳಿದಾಗ ಹೇಳುತ್ತೇನೆ ಹೊರತು, ಯಾರಿಗೆ ಕೊಡಬೇಕೆಂದು ಹೇಳಲ್ಲ. ಮಾರ್ಚ್ ಮೊದಲ ವಾರ ಟಿಕೆಟ್ ಘೋಷಣೆ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದರು.