ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ರಾಜೀನಾಮೆ ನೀಡುವುದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ಕೆಲವು ದಿನಗಳ ಹಿಂದೆ ಹೊರಟ್ಟಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬುದಾಗಿ ಸೋಷಿಯಲ್ ಮೀಡಿಯಾದಲ್ಲಿ ರಾಜೀನಾಮೆ ಪತ್ರ ವೈರಲ್ ಆಗಿತ್ತು. ಆ ಬಗ್ಗೆ ಸಹಿ ಮಾಡಿದಂತ ಪತ್ರ ನನ್ನ ಡ್ರಾನಲ್ಲೇ ಇದೆ ಎಂದಿದ್ದರು. ಇದೀಗ ರಾಜೀನಾಮೆ ನೀಡುವುದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಇಂದು (ಮಾರ್ಚ್ 25) ಸುದ್ದಿಗಾರರೊಂದಿಗೆ ಮಾತನಾಡಿರುವ ಹೊರಟ್ಟಿ, ರಾಜೀನಾಮೆ ಸುದ್ದಿ ಹರಿದಾಡಿದ ಬಳಿಕ ರಾಜ್ಯಪಾಲರು, ಮಂತ್ರಿಗಳು, ಸಾಹಿತಿಗಳು ಮಾತನಾಡಿದ್ದಾರೆ. 27ನೇ ತಾರೀಕು ಕೂತು ಮಾತನಾಡಿ ತೀರ್ಮಾನ ಮಾಡೋಣ ಅಂದಿದ್ದಾರೆ . ಹೀಗಾಗಿ ಅದನ್ನ(ರಾಜೀನಾಮೆ) ಅಲ್ಲಿಗೆ ಕೈ ಬಿಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಎಲ್ಲರೂ ಸಹ ನೀವೇ ರಾಜೀನಾಮೆ ಕೊಡಬೇಡಿ ಎಂದು ಹೇಳುತ್ತಿದ್ದಾರೆ. ನಾನು ಮಾಡಿದ ತೀರ್ಮಾನಕ್ಕೆ ವಿರೋಧ ಬಂತು . ನಮ್ಮ ಶಾಸನ ಸಭೆ ಸದಸ್ಯರು ನೋಡೋಣ ರಾಜೀನಾಮೆ ಬೇಡ ಎಂದಿದ್ದಾರೆ. ಪುಟ್ಟಣ್ಣ ಕರೆ ಮಾಡಿ ರಾಜೀನಾಮೆ ವಿಷಯದಲ್ಲಿ ಮುಂದುವರಿಬೇಡಿ ಅಂದ್ರು. ಸಾರ್ವಜನಿಕ ವಲಯದಲ್ಲಿ ನನಗೆ ಇಷ್ಟೊಂದು ಗೌರವ ಕೊಡುತ್ತಿರುವುದಕ್ಕೆ ನಾನು ರಾಜೀನಾಮೆಯಿಂದ ಹಿಂದೆ ಸರಿದಿದ್ದೇನೆ ಎಂದು ಬಸವರಾಜ್ ಹೊರಟ್ಟಿ ಹೇಳಿದರು.
ಹಲವು ನಾಯಕರು ರಾಜೀನಾಮೆ ಕೊಡುವುದರಿಂದ ಎಲ್ಲಾ ಬಗೆ ಹರಿಯುವುದಿಲ್ಲ ಅಂದ್ರು. ಹೀಗಾಗಿ ರಾಜೀನಾಮೆ ನೀಡಬಾರದು ಎಂದು ಈಗಾಗಲೇ ತೀರ್ಮಾನ ಮಾಡಿದ್ದೇನೆ. 27ರ ನಂತರ ಎಲ್ಲಾ 75 ಸದಸ್ಯರಿಗೆ ಪತ್ರ ಕಳುಹಿಸುತ್ತೇನೆ. ಯಾರು ನನ್ನ ಮಾತು ಮೀರಲ್ಲ ಎನ್ನುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಗಿನ ದಿನಮಾನಗಳಲ್ಲಿ ಒಣ ಪ್ರತಿಷ್ಠೆನೇ ಜಾಸ್ತಿ ಆಗಿದೆ. ಜನರ ಅಭಿವೃದ್ಧಿ ಬಗ್ಗೆ ಯಾವ ಚರ್ಚೆ ಕೂಡ ಆಗಿಲ್ಲ . ಹನಿಟ್ರ್ಯಾಪ್ ಬಗ್ಗೆ ಮುಖ್ಯಮಂತ್ರಿ ಕ್ರಮ ಕೈಗೊಳ್ಳುತ್ತೇವೆ ಅಂದ್ರೆ ಮುಗಿದೋಯ್ತು. ಮುಂದಿನ ಅಧಿವೇಶನಕ್ಕೆ ಸದನ ಉತ್ತಮಗೊಳಿಸುವ ಕೆಲಸ ಮಾಡುತ್ತೇವೆ. ಈ ಘಟನೆ ಆಗಿದ್ದು ಒಳ್ಳೆದಾಯ್ತು, ಸುಧಾರಣೆಗೆ ಒಂದು ದಾರಿ ಆದಂತಾಗಿದೆ. ನಾನು ಸ್ವಲ್ಪ ಭಾವುಕನಾಗೋದು ಸಹಜವಾಗಿ ಕಣ್ಣಲ್ಲಿ ನೀರು ಬರುತ್ತೆ. ವ್ಯವಸ್ಥೆ ಸರಿ ಪಡಿಸಲು ಏನಾದರೂ ಮಾಡಬೇಕು . ಜನರ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.