ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷದ ಪರವಾಗಿ ಪ್ರಚಾರ ಮಾಡುವುದಾಗಿ ಕಿಚ್ಚ ಸುದೀಪ್ ಬುಧವಾರ ಸ್ಪಷ್ಟಪಡಿಸಿದರು. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಈ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳನ್ನು ತಳ್ಳಿಹಾಕಿದ ಸುದೀಪ್ ನಾನು ಬಿಜೆಪಿ ಪರ ಪ್ರಚಾರ ಮಾತ್ರ ಮಾಡುತ್ತೇನೆ, ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದರು.
ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪಕ್ಷದ ಇತರ ಮುಖಂಡರ ಸಮ್ಮುಖದಲ್ಲಿ ಇಂದು ನಟ ಅವರು ಪಕ್ಷಕ್ಕೆ ಸೇರುವ ಸಾಧ್ಯತೆಯಿದೆ ಎಂಬ ಸುದ್ದಿ ಓಡಾಡುತ್ತಿತ್ತು. ನಟನ ಸೇರ್ಪಡೆಯಿಂದ ಬಿಜೆಪಿಗೆ ಲಾಭವಾಗಲಿದೆ ಎಂದು ಕರ್ನಾಟಕ ಸಾರಿಗೆ ಸಚಿವ ಬಿ ಶ್ರೀರಾಮುಲು ಹೇಳಿದ್ದರು. ಆದರೆ ಈಗ ಅದೆಲ್ಲದಕ್ಕೂ ತೆರೆ ಎಳೆದ ಸುದೀಪ್ ಸ್ಪರ್ಧೆ ಇಲ್ಲ ಎಂದು ಫುಲ್ ಸ್ಟಾಪ್ ಇಟ್ಟಿದ್ದಾರೆ.
ಈ ಮಧ್ಯೆ ಕಿಚ್ಚ ಸುದೀಪ್ ಅವರ ಮ್ಯಾನೇಜರ್ ಜಾಕ್ ಮಂಜು ಅವರಿಗೆ ಬುಧವಾರ ಬೆದರಿಕೆ ಪತ್ರ ಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸರ ಪ್ರಕಾರ, ಸುದೀಪ್ ಅವರ ಮ್ಯಾನೇಜರ್ ಅಪರಿಚಿತ ವ್ಯಕ್ತಿಯಿಂದ ಪತ್ರವನ್ನು ಸ್ವೀಕರಿಸಿದ್ದಾರೆ, ನಟನ “ಖಾಸಗಿ ವೀಡಿಯೊ” ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಬೆದರಿಕೆ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.