ಹೊಸದಿಗಂತ ಡಿಜಿಟಲ್ ಡೆಸ್ಕ್:
ನನಗೂ ಜ್ಯೋತಿಷ್ಯ ಕೇಳುವ ಚಟ ಇದೆ. ಈಗ ಅಶೋಕ್ ಅವರು ಜ್ಯೋತಿಷ್ಯ ಹೇಳುವ ಬೋರ್ಡ್ ಹಾಕಿಕೊಂಡಿದ್ದಾರೆ. ಸಮಯ ಬಿಡುವು ಮಾಡಿಕೊಂಡು ನಾನು ಅವರ ಬಳಿ ಹೋಗಿ ಶಾಸ್ತ್ರ ಕೇಳುತ್ತೇನೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಸಿಎಂ ಬದಲಾವಣೆಯ ದಿನಾಂಕ ಘೋಷಣೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನಗೂ ಜ್ಯೋತಿಷ್ಯ ಕೇಳುವ ಚಟ ಇದೆ, ಬಿಡುವು ಮಾಡಿಕೊಂಡು ನಾನು ಅವರ ಬಳಿ ಹೋಗಿ ಶಾಸ್ತ್ರ ಕೇಳುತ್ತೇನೆ ಎಂದು ಲೇವಡಿ ಮಾಡಿದರು.
ಜೆಡಿಎಸ್ ಶಾಸಕರು ನಿಮ್ಮ ಸಂಪರ್ಕದಲ್ಲಿ ಇದ್ದಾರಾ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಜೆಡಿಎಸ್ ಶಾಸಕರ ವಿಚಾರವಾಗಿ ಮಾತನಾಡಿಲ್ಲ, ಜೆಡಿಎಸ್ ಕಾರ್ಯಕರ್ತರು ತಮ್ಮ ಭವಿಷ್ಯವನ್ನು ತಾವು ನೋಡಿಕೊಳ್ಳಬೇಕು ಎಂದು ಕರೆ ನೀಡಿದ್ದೇನೆ. ಆ ಕಾರ್ಯಕರ್ತರು ಕೂಡ ಎಷ್ಟು ದಿನ ಎಂದು ಕಾಯಲು ಸಾಧ್ಯ? ಅವರಿಗೂ ಜಾತ್ಯಾತೀತ ಸಿದ್ಧಾಂತದ ರಾಷ್ಟ್ರೀಯ ಪಕ್ಷದ ಅಗತ್ಯವಿದೆ. ಅನೇಕ ಕಾರ್ಯಕರ್ತರು ನಮ್ಮ ಪಕ್ಷ ಸೇರಲು ಮುಂದಾಗಿದ್ದಾರೆ” ಎಂದು ತಿಳಿಸಿದರು.
ಶಾಸಕರು ನಿಮ್ಮ ಪಕ್ಷ ಸೇರಲು ಮುಂದೆ ಬಂದರೆ ಎಂದು ಕೇಳಿದಾಗ, “ಆ ವಿಚಾರ ಮುಂದೆ ನೋಡೋಣ. ನಾನು ಅದರ ಬಗ್ಗೆ ಆಲೋಚನೆ ಮಾಡಿಲ್ಲ. ಯಾವ ಶಾಸಕರು ನಮ್ಮ ಸಂಪರ್ಕದಲ್ಲಿ ಇಲ್ಲ. ನಾನು ಯಾರ ಜತೆಗೂ ಮಾತನಾಡಿಲ್ಲ. ಇದೆಲ್ಲವೂ ಸುಳ್ಳು ಸುದ್ದಿ ಎಂದು ತಿಳಿಸಿದರು.