ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಸ್ಕಾಂ ಎಂಡಿ, ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಕಲಬುರಗಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದು, ಹುಟ್ಟೂರು ಬೆಳಗಾವಿಯ ರಾಮದುರ್ಗದಲ್ಲಿ ಇಂದು ಬೀಳಗಿ ಅವರ ಅಂತ್ಯಕ್ರಿಯೆ ನಡೆಯಲಿದೆ.
ಕಡುಬಡತನದಿಂದಲೇ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ದಕ್ಷ ಐಎಎಸ್ ಅಧಿಕಾರಿಯಾಗಿದ್ದ ಮಹಾಂತೇಶ್ ಬೀಳಗಿ ಇಡೀ ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದರು. ಇಂತಹ ದಕ್ಷ ಅಧಿಕಾರಿಯಾದ ಮಹಾಂತೇಶ್ ಬೀಳಗಿ ಮಂಗಳವಾರ ಕಲಬುರಗಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದುರಂತ ಸಾವನ್ನಪ್ಪಿದ್ದಾರೆ.
ಮದುವೆ ಕಾರ್ಯಕ್ರಮಕ್ಕಾಗಿ, ಮಂಗಳವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಬೆಳಗಾವಿಯ ರಾಮದುರ್ಗದಿಂದ ಕಲಬುರಗಿಯತ್ತ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಇನ್ನೇನು 60 ಕಿ.ಮೀ ಸಂಚರಿಸಿದರೆ ಸಂಬಂಧಿಕರ ಮನೆಗೆ ತಲುಪುತ್ತಿದ್ದರು. ಆದರೆ ಅಷ್ಟರಲ್ಲಿ ಜೇವರ್ಗಿಯ ಗೌನಳ್ಳಿ ಕ್ರಾಸ್ ಬಳಿ ಇವರ ವಾಹನಕ್ಕೆ ಅಡ್ಡಲಾಗಿ ಬೈಕ್ ಸವಾರನೋರ್ವ ಬಂದ ಪರಿಣಾಮ ಬೈಕ್ ಸವಾರನನ್ನು ಉಳಿಸಲು ಹೋಗಿ ಸೇತುವೆಗೆ ರಭಸವಾಗಿ ಕಾರ್ ಡಿಕ್ಕಿ ಹೊಡೆದು ಸೇತುವೆಯ ಕೆಳಗೆ ಕಾರು ಪಲ್ಟಿಯಾಗಿದೆ. ಈ ವೇಳೆ ಈರಣ್ಣ ಬೀಳಗಿ ಹಾಗು ಹಾಗೂ ಶಂಕರ್ ಬೀಳಗಿ ಸ್ಥಳದಲ್ಲೆ ಸಾವನಪ್ಪಿದ್ರೆ, ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರನ್ನ ಕಲಬುರಗಿ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ನಿಧನ: ಇಂದು ಹುಟ್ಟೂರಲ್ಲಿ ಅಂತ್ಯಕ್ರಿಯೆ

