ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಮುಖ್ಯ ಕಾರ್ಯದರ್ಶಿಯಾಗಿ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.
ಹಾಲಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರ ಅಧಿಕಾರದ ಅವಧಿಯು ಜುಲೈ 31ಕ್ಕೆ ಮುಗಿಯುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಶಾಲಿನಿ ರಜನೀಶ್ ಅವರನ್ನು ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಿಸಿದೆ. ಶಾಲಿನಿ ರಜನೀಶ್ ಅವರು ರಜನೀಶ್ ಗೋಯಲ್ ಅವರ ಪತ್ನಿ ಎಂಬುದು ಗಮನಾರ್ಹ ಸಂಗತಿಯಾಗಿದೆ.
ರಜನೀಶ್ ಗೋಯಲ್ ಅವರು ಸೇವಾ ನಿವೃತ್ತಿ ಹೊಂದುತ್ತಿದ್ದಾರೆ. ಜುಲೈ 31ಕ್ಕೆ ಅವರ ಅಧಿಕಾರದ ಅವಧಿ ಮುಗಿಯಲಿದೆ. ಇನ್ನು, ಶಾಲಿನಿ ರಜನೀಶ್ ಅವರು ಈಗ ಅಭಿವೃದ್ಧಿ ಆಯುಕ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಅವರಿಗೆ ಜ್ಯೇಷ್ಠತೆಯ ಆಧಾರದ ಮೇಲೆ ಮುಂಬಡ್ತಿ ನೀಡಲಾಗಿದೆ. ರಜನೀಶ್ ಗೋಯಲ್ ಅವರ ನಂತರ ಜ್ಯೇಷ್ಠತೆಯ ಆಧಾರದ ಮೇಲೆ ರೇಸ್‌ನಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಅಜಯ್ ಸೇಠ್ ಹಾಗೂ ಶಾಲಿನಿ ರಜನೀಶ್ ಅವರಿದ್ದರು. ಈಗ ರಾಜ್ಯ ಸರ್ಕಾರವು ಶಾಲಿನಿ ರಜನೀಶ್ ಅವರಿಗೇ ಮಣೆ ಹಾಕಿದೆ. 2027ರ ಜೂನ್‌ಗೆ ಇವರು ನಿವೃತ್ತಿ ಹೊಂದಲಿದ್ದಾರೆ.