ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಲಂಕಾದ ಕ್ರಿಕೆಟ್ ವಲಯದಲ್ಲಿ ಮತ್ತೊಂದು ದೊಡ್ಡ ಸುದ್ದಿಯಾಗಿದೆ. ಮಾಜಿ ಕ್ರಿಕೆಟಿಗ ಸಲಿಯಾ ಸಮನ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) 5 ವರ್ಷಗಳ ಕಾಲ ಎಲ್ಲಾ ರೀತಿಯ ಕ್ರಿಕೆಟ್ ಚಟುವಟಿಕೆಗಳಿಂದ ನಿಷೇಧಿಸಿದೆ. ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ತಪ್ಪಿತಸ್ಥರೆಂದು ತೀರ್ಮಾನಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಕ್ರಿಕೆಟ್ ಜಗತ್ತಿನಲ್ಲಿ ಭ್ರಷ್ಟಾಚಾರದ ವಿರುದ್ಧ ಐಸಿಸಿ ಕಠಿಣ ಕ್ರಮ ಕೈಗೊಳ್ಳುತ್ತಲೇ ಬಂದಿದೆ ಮತ್ತು ಅದರ ಭಾಗವಾಗಿ ಸಮನ್ ವಿರುದ್ಧವೂ ಕ್ರಮ ಜರುಗಿದೆ.
2021ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದ ಅಬುಧಾಬಿ ಟಿ10 ಲೀಗ್ ವೇಳೆ ಸಲಿಯಾ ಸಮನ್ ಮ್ಯಾಚ್ ಫಿಕ್ಸಿಂಗ್ ಮಾಡಲು ಪ್ರಯತ್ನಿಸಿದ್ದಾರೆಯೆಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಪ್ರಕರಣವನ್ನು ಐಸಿಸಿ ಭ್ರಷ್ಟಾಚಾರ ವಿರೋಧಿ ನ್ಯಾಯಮಂಡಳಿ ಗಂಭೀರವಾಗಿ ಪರಿಗಣಿಸಿ ಸಮನ್ ಸೇರಿದಂತೆ ಒಟ್ಟು ಎಂಟು ಮಂದಿಯನ್ನು ವಿಚಾರಣೆಗೆ ಒಳಪಡಿಸಿತು. ಅಂತಿಮವಾಗಿ ಐಸಿಸಿ ಸಂಹಿತೆಯ 2.1.1, 2.1.3 ಮತ್ತು 2.1.4 ವಿಧಿಗಳನ್ನು ಸಮನ್ ಉಲ್ಲಂಘಿಸಿರುವುದು ಸಾಬೀತಾಗಿದೆ. ಇದರ ಆಧಾರದ ಮೇಲೆ ಐಸಿಸಿ 5 ವರ್ಷಗಳ ಕಾಲ ನಿಷೇಧ ಹೇರಿದೆ.
ಈ ನಿಷೇಧವು ಸೆಪ್ಟೆಂಬರ್ 13, 2023ರಿಂದ ಜಾರಿಗೆ ಬಂದು, ಈಗಾಗಲೇ ಎರಡು ವರ್ಷಗಳ ಕಾಲ ಶಿಕ್ಷೆ ಅನುಭವಿಸಿರುವ ಸಮನ್ ಮುಂದಿನ ಮೂರು ವರ್ಷಗಳಿಗೂ ಬ್ಯಾನ್ ಅನುಭವಿಸಬೇಕಾಗಿದೆ. ಕ್ರಿಕೆಟ್‌ನಲ್ಲಿ ಫಿಕ್ಸಿಂಗ್ ಮಾಡಲು ಯತ್ನಿಸುವುದೇ ಗಂಭೀರ ಅಪರಾಧವೆಂದು ಐಸಿಸಿ ಮತ್ತೊಮ್ಮೆ ಸ್ಪಷ್ಟ ಸಂದೇಶ ನೀಡಿದೆ.
ಸಲಿಯಾ ಸಮನ್ ಶ್ರೀಲಂಕಾದ ದೇಶೀಯ ಕ್ರಿಕೆಟ್‌ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದರು. ಅವರು 101 ಪ್ರಥಮ ದರ್ಜೆ, 77 ಲಿಸ್ಟ್ ಎ ಮತ್ತು 47 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 3,600 ಕ್ಕೂ ಹೆಚ್ಚು ರನ್ ಗಳಿಸಿದ ಸಮನ್ 231 ಪ್ರಥಮ ದರ್ಜೆ ವಿಕೆಟ್‌ಗಳನ್ನು ಪಡೆದಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಅವಕಾಶ ದೊರಕದಿದ್ದರೂ, ದೇಶೀಯ ಅಂಗಳದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.