ಹೊಸದಿಗಂತ ಡಿಜಿಟಲ್ ಡೆಸ್ಕ್:
ODI ವಿಶ್ವಕಪ್‌ನಲ್ಲಿ ಪಾಕಿಸ್ತಾನ ತನ್ನ ಎರಡು ಲೀಗ್ ಪಂದ್ಯಗಳ ಸ್ಥಳವನ್ನು ಬದಲಾಯಿಸಲು ಬಯಸಿದ್ದು, ಆದ್ರೆ ಐಸಿಸಿ ಮತ್ತು ಬಿಸಿಸಿಐ, ಪಾಕಿಸ್ತಾನದ ಬೇಡಿಕೆಯನ್ನು ತಿರಸ್ಕರಿಸಿದೆ.
ಕರಡು ವೇಳಾಪಟ್ಟಿ ಪ್ರಕಾರ, ಅಕ್ಟೋಬರ್ 20 ರಂದು ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮತ್ತು ಅಕ್ಟೋಬರ್ 23 ರಂದು ಅಫ್ಘಾನಿಸ್ತಾನದೊಂದಿಗೆ ಆಡುವ ಪಂದ್ಯದ ಸ್ಥಳವನ್ನು ಬದಲಾಯಿಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಮನವಿ ಮಾಡಿತ್ತು.
ಅಫ್ಘಾನಿಸ್ತಾನ ವಿರುದ್ಧ ಬೆಂಗಳೂರಿನಲ್ಲಿ ಮತ್ತು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ಆಡಲು ಪಾಕಿಸ್ತಾನ ಬಯಸಿತ್ತು. ಆದ್ರೆ ಪಾಕಿಸ್ತಾನವನ್ನು ತನ್ನ ಲೀಗ್ ಪಂದ್ಯಗಳ ಸ್ಥಳವನ್ನು ಬದಲಾಯಿಸಲು ಕಾರಣವೇನು ಎನ್ನುವುದನ್ನು ಸ್ಪಷ್ಟಪಡಿಸಿಲ್ಲ. ಆ ಕಾರಣಕ್ಕಾಗಿ ಪಾಕಿಸ್ತಾನದ ಮನವಿಯನ್ನು ತಿರಸ್ಕಾರ ಮಾಡಲಾಗಿದೆ.
ಸಾಮಾನ್ಯವಾಗಿ ಐಸಿಸಿ ಪ್ರಕಟಿಸುವ ಕರಡು ವೇಳಾಪಟ್ಟಿಯೇ ಹೆಚ್ಚೂ ಕಡಿಮೆ ಅಂತಿಮವಾಗುತ್ತದೆ. ಆದರೆ, ಯಾವುದಾದರೂ ದೇಶಗಳು ಕೆಲವು ನಗರಗಳಲ್ಲಿ ಆಡಲು ತಮಗೆ ಭದ್ರತಾ ಆತಂಕವಿದೆ ಎಂದು ಹೇಳಿದಾಗ ಮಾತ್ರವೇ ಐಸಿಸಿ ಈ ಬಗ್ಗೆ ಪರಿಶೀಲನೆ ಮಾಡಿ ಸ್ಥಳವನ್ನು ಬದಲಾವಣೆ ಮಾಡುತ್ತದೆ. ಉದಾಹರಣೆಗೆ 2016ರ ಟಿ20 ವಿಶ್ವಕಪ್‌ಗೆ ಭಾರತ ಆತಿಥ್ಯ ವಹಿಸಿತ್ತು. ಈ ವೇಳೆ ಮಾರ್ಚ್ 19 ರಂದು ಭಾರತ ಹಾಗೂ ಪಾಕಿಸ್ತಾನ ನಡುವೆ ಧರ್ಮಶಾಲಾದಲ್ಲಿ ಪಂದ್ಯ ನಡೆಯಬೇಕಿತ್ತು. ಆದರೆ, ಭಾರತ ಸರ್ಕಾರ ಸೂಕ್ತ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ ಬಳಿಕ ಪಂದ್ಯವನ್ನು ಕೋಲ್ಕತ್ತಾಕ್ಕೆ ಶಿಫ್ಟ್ ಮಾಡಲಾಗಿತ್ತು. ಆದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಆಂತತಿಕ ನೋಟ್‌ನಲ್ಲಿ ಧರ್ಮಶಾಲಾದಲ್ಲಿ ಆಡಲು ತನಗೆ ಯಾವುದೇ ಭದ್ರತಾ ಆತಂಕವಿಲ್ಲ ಎಂದು ತಿಳಿಸಿತ್ತು.ಆದರೆ, ಐಸಿಸಿ ಭಾರತ ಸರ್ಕಾರದ ಮಾತನ್ನು ಮಾನ್ಯ ಮಾಡಿದ್ದರಿಂದ ಪಂದ್ಯವನ್ನು ಕೋಲ್ಕತ್ತಕ್ಕೆ ಶಿಫ್ಟ್ ಮಾಡುವ ನಿರ್ಧಾರ ಮಾಡಿತ್ತು. ಈ ವೇಳೆ ಪಾಕಿಸ್ತಾನ ಅಥವಾ ಬಿಸಿಸಿಯ ಯಾವ ಮಂಡಳಿಗಳ ಮಾತನ್ನೂ ಆಲಿಸಿರಲಿಲ್ಲ.
ಚೆನ್ನೈನ ಚೆಪಾಕ್ ಸ್ಟೇಡಿಯಂ ಸ್ಪಿನ್ನರ್‌ಗಳಿಗೆ ಅದ್ಭುತವಾಗಿ ನೆರವು ನೀಡುತ್ತದೆ. ಹಾಲಿ ಪರಿಸ್ಥಿತಿಯಲ್ಲಿ ಪಾಕಿಸ್ತಾನ ತಂಡಕ್ಕಿಂತ ವಿಶ್ವದರ್ಜೆಯ ಸ್ಪಿನ್ನರ್‌ಗಳು ಅಫ್ಘಾನಿಸ್ತಾನ ತಂಡದಲ್ಲಿದ್ದಾರೆ. ರಶೀದ್ ಖಾನ್, ನೂರ್ ಅಹ್ಮದ್, ಮುಜೀಬ್ ಉರ್ ರೆಹಮಾನ್ ಹಾಗೂ ಮೊಹಮದ್ ನಬಿಯಂಥ ವಿಶ್ವದರ್ಜೆಯ ಸ್ಪಿನ್ನರ್‌ಗಳು ಅಫ್ಘಾನಿಸ್ತಾನ ತಂಡದಲ್ಲಿದ್ದಾರೆ. ಒಂದು ಸ್ವಲ್ಪ ಹೆಚ್ಚೂ ಕಡಿಮೆಯಾದರೂ, ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ ಸೋಲು ಕಾಣುವ ಅಪಾಯವಿದೆ. ಆ ಕಾರಣಕ್ಕಾಗಿ ಬ್ಯಾಟಿಂಗ್ ಸ್ನೇಹಿಯಾಗಿರುವ ಬೆಂಗಳೂರಿನಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಡಲು ಪಾಕಿಸ್ತಾನ ಬಯಸಿದೆ.
ಇನ್ನು ಬ್ಯಾಟಿಂಗ್ ಸ್ನೇಹಿಯಾಗಿರುವ ಬೆಂಗಳೂರು ಪಿಚ್‌ನಲ್ಲಿ ಆಸೀಸ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವುದು ಪಾಕಿಸ್ತಾನದ ಬೌಲರ್‌ಗಳಿಗೆ ಸವಾಲಾಗಲಿದೆ. ಹಾಗಾಗಿ ಬೆಂಗಳೂರಿನಲ್ಲಿ ಆಸೀಸ್ ವಿರುದ್ಧದ ಪಂದ್ಯವನ್ನು ಚೆನ್ನೈಗೆ ಶಿಫ್ಟ್ ಮಾಡುವಂತೆ ಮನವಿ ಮಾಡಿದೆ ಎನ್ನಲಾಗಿದೆ.