ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಸಿಸಿ ನೂತನ ಟೆಸ್ಟ್ ರ್ಯಾಂಕಿಂಗ್ ಪ್ರಕಟಗೊಂಡಿದ್ದು, ಪಾದಾರ್ಪಣೆ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್, ಬ್ಯಾಟಿಂಗ್ ಶ್ರೇಯಾಂಕದಲ್ಲಿ ಗಣನೀಯ ಏರಿಕೆ ಕಂಡಿದ್ದಾರೆ.
ಇನ್ನು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಾಪ್ 10 ಪಟ್ಟಿಯೊಳಗೆ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ
ಯಶಸ್ವಿ ಜೈಸ್ವಾಲ್, 11 ಸ್ಥಾನ ಜಿಗಿತ ಕಂಡು ಐಸಿಸಿ ಟೆಸ್ಟ್ ಬ್ಯಾಟರ್ಗಳ ರ್ಯಾಂಕಿಂಗ್ನಲ್ಲಿ 63ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 759 ರೇಟಿಂಗ್ ಅಂಕಗಳೊಂದಿಗೆ ಟೆಸ್ಟ್ ಬ್ಯಾಟರ್ಗಳ ರ್ಯಾಂಕಿಂಗ್ನಲ್ಲಿ ಶ್ರೀಲಂಕಾದ ಬ್ಯಾಟರ್ ದೀಮುತ್ ಕರುಣರತ್ನೆ ಜತೆಗೆ ಜಂಟಿ 9ನೇ ಸ್ಥಾನ ಹಂಚಿಕೊಂಡಿದ್ದಾರೆ.
ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಒಂದು ಸ್ಥಾನ ಕುಸಿದು 12ನೇ ಸ್ಥಾನಕ್ಕೆ ಜಾರಿದ್ದಾರೆ. ಇನ್ನೊಂದೆಡೆ ವಿರಾಟ್ ಕೊಹ್ಲಿ 733 ರೇಟಿಂಗ್ ಅಂಕಗಳನ್ನು ಹೊಂದಿದ್ದು, 14ನೇ ಸ್ಥಾನದಲ್ಲಿಯೇ ಮುಂದುವರೆದಿದ್ದಾರೆ.
ಇನ್ನು ನ್ಯೂಜಿಲೆಂಡ್ ತಂಡದ ಅನುಭವಿ ಬ್ಯಾಟರ್ ಕೇನ್ ವಿಲಿಯಮ್ಸನ್ 883 ರೇಟಿಂಗ್ ಅಂಕಗಳೊಂದಿಗೆ ನಂ.1 ಸ್ಥಾನದಲ್ಲೇ ಮುಂದುವರೆದಿದ್ದಾರೆ. ಇನ್ನುಳಿದಂತೆ ಆಸ್ಟ್ರೇಲಿಯಾದ ಮಾರ್ನಸ್ ಲಬುಶೇನ್ ಹಾಗೂ ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲೇ ಮುಂದುವರೆದಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನಂ.1 ಸ್ಥಾನದಲ್ಲೇ ಭದ್ರವಾಗಿ ಮುಂದುವರೆದಿದ್ದಾರೆ. ಅಶ್ವಿನ್, 879 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ. ಇನ್ನು ಸಹ ಆಟಗಾರ ರವೀಂದ್ರ ಜಡೇಜಾ 782 ರೇಟಿಂಗ್ ಅಂಕಗಳೊಂದಿಗೆ ಬೌಲಿಂಗ್ ಶ್ರೇಯಾಂಕದಲ್ಲಿ ಆರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.ಟೀಂ ಇಂಡಿಯಾದ ಮತ್ತೋರ್ವ ಆಲ್ರೌಂಡರ್ ಅಕ್ಷರ್ ಪಟೇಲ್ ಆಲ್ರೌಂಡರ್ ವಿಭಾಗದಲ್ಲಿ 5ನೇ ಸ್ಥಾನದಲ್ಲೇ ಭದ್ರವಾಗಿದ್ದಾರೆ.