ಹೊಸದಿಗಂತ ಡಿಜಿಟಲ್ ಡೆಸ್ಕ್:
13ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಅಧಿಕೃತ ವೇಳಾಪಟ್ಟಿ ಕೊನೆಗೂ ಹೊರಬಿದ್ದಿದೆ. ಅ.5ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯದ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ .
ಈ ಮದ್ಯೆ ಪಾಕ್ ತಂಡದ ಕಿರಿಕಿರಿ ಇನ್ನು ಮುಗಿದಿಲ್ಲ. ಅ.15ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.
ಇತ್ತ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದ್ದರೂ ಪಾಕಿಸ್ತಾನ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಇನ್ನೂ ಖಚಿತವಾಗಿಲ್ಲ. ಪಾಕ್ ಕ್ರಿಕೆಟ್ ಮಂಡಳಿ(ಪಿಸಿಬಿ) ಈಗಲೂ ಸರ್ಕಾರದಿಂದ ಅನುಮತಿಗೆ ಕಾಯುತ್ತಿದೆ. ಈ ಬಗ್ಗೆ ಪಿಸಿಬಿ(PCB) ಮಾಹಿತಿ ನೀಡಿದ್ದು, ‘ಟೂರ್ನಿಯಲ್ಲಿ ಪಾಕ್ ತಂಡ ಪಾಲ್ಗೊಳ್ಳಲು ಹಾಗೂ ಅಹಮದಾಬಾದ್, ಮುಂಬೈನಲ್ಲಿ ಪಂದ್ಯವಾಡಲು ಸರ್ಕಾರ ಇನ್ನಷ್ಟೇ ಅನುಮತಿ ನೀಡಬೇಕು. ಸರ್ಕಾರ ಅನುಮತಿಸಿದರೆ ಮಾತ್ರ ಭಾರತಕ್ಕೆ ತೆರಳಲಿದ್ದೇವೆ’ ಎಂದಿದೆ. ಆದರೆ ಪಾಕ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಬಗ್ಗೆ ಐಸಿಸಿ (ICC) ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದೆ.
ಪಾಕ್ ಮನವಿ ತಿರಸ್ಕೃತ
ಈ ಹಿಂದೆ ಟೂರ್ನಿಯ ತನ್ನ ಕೆಲ ಪಂದ್ಯಗಳ ಸ್ಥಳ ಬದಲಾವಣೆ ಮಾಡುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾಡಿದ್ದ ಮನವಿಯನ್ನು ಐಸಿಸಿ, ಬಿಸಿಸಿಐ (BCCI) ತಿರಸ್ಕರಿಸಿದೆ. ಅಹಮದಾಬಾದ್ ಜೊತೆಗೆ ಇತರ 4 ಕ್ರೀಡಾಂಗಣಗಳಲ್ಲೂ ಪಾಕ್ ತನ್ನ ಪಂದ್ಯಗಳನ್ನಾಡಲಿದೆ. ಈ ಪೈಕಿ ಆಸ್ಟ್ರೇಲಿಯಾ(ಅ.20) ಹಾಗೂ ನ್ಯೂಜಿಲೆಂಡ್(ನ.04) ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M Chinnaswamy Stadium) ಸೆಣಸಾಡಲಿದ್ದು, ಕೋಲ್ಕತಾ, ಹೈದರಾಬಾದ್, ಚೆನ್ನೈನಲ್ಲೂ ತಲಾ 2 ಪಂದ್ಯಗಳನ್ನಾಡಲಿದೆ.