ಇಂಗ್ಲೆಂಡ್‌ ವಿರುದ್ದದ ಮ್ಯಾಚ್ ನಲ್ಲಿ ನಿಯಮ ಉಲ್ಲಂಘನೆ: ರಿಷಭ್ ಪಂತ್​ಗೆ ಐಸಿಸಿಯಿಂದ ವಾಗ್ದಂಡನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇಂಗ್ಲೆಂಡ್‌ ವಿರುದ್ದದ ಲೀಡ್ಸ್ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಭರ್ಜರಿ ಶತಕ ಬಾರಿಸಿದ ಟೀಂ ಇಂಡಿಯಾದ ವಿಕೆಟ್​ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಐಸಿಸಿಯಿಂದ ವಾಗ್ದಂಡನೆಗೆ ಗುರಿಯಾಗಿದ್ದಾರೆ.

ಐಸಿಸಿ (ICC) ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ರಿಷಭ್ ಪಂತ್‌ಗೆ ವಾಗ್ದಂಡನೆ ವಿಧಿಸಲಾಗಿದ್ದು, ಪಂತ್ ಲೆವೆಲ್ 1 ರ ಅಡಿಯಲ್ಲಿ ತಪ್ಪಿತಸ್ಥನೆಂದು ಕಂಡುಬಂದಿದೆ. ಹೀಗಾಗಿ ಮ್ಯಾಚ್ ರೆಫರಿ, ಪಂತ್​ಗೆ ವಾಗ್ದಂಡನೆ ನೀಡಿದ್ದಾರೆ.

ಐಸಿಸಿ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ನಿರ್ಧಾರವನ್ನು ಪ್ರತಿಭಟಿಸುವುದು ಅಥವಾ ಆಕ್ಷೇಪಿಸುವುದಕ್ಕೆ ಸಂಬಂಧಿಸಿದ ಆರ್ಟಿಕಲ್ 2.8 ರ ಅಡಿಯಲ್ಲಿ ಪಂತ್ ತಪ್ಪಿತಸ್ಥನೆಂದು ಕಂಡುಬಂದಿದ್ದಾರೆ. ಹೀಗಾಗಿ ಈ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪಂತ್ ಅವರ ಖಾತೆಗೆ 1 ಡಿಮೆರಿಟ್ ಪಾಯಿಂಟ್ ನೀಡಲಾಗಿದೆ ಎಂದು ಐಸಿಸಿ ತಿಳಿಸಿದೆ.

ಲೀಡ್ಸ್ ಟೆಸ್ಟ್‌ನ ಮೂರನೇ ದಿನದಂದು ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್‌ನ 61 ನೇ ಓವರ್‌ನಲ್ಲಿ ಚೆಂಡಿನ ಆಕಾರ ಬದಲಾಗಿದ್ದು ಅದನ್ನು ಬದಲಿಸುವಂತೆ ಪಂತ್, ಅಂಪೈರ್ ಬಳಿ ಮನವಿ ಮಾಡಿದರು. ಆದರೆ ಚೆಂಡನ್ನು ಗೇಜ್​ನಿಂದ ಪರೀಕ್ಷಿಸಿದ ಅಂಪೈರ್, ಚೆಂಡು ನಿಯಮಗಳಿಗನುಸಾರವಾಗಿ ಇದ್ದ ಕಾರಣ ಚೆಂಡನ್ನು ಬದಲಾಯಿಸಲು ನಿರಾಕರಿಸಿದರು. ಇದರಿಂದ ಅಸಮಾಧಾನಗೊಂಡ ಪಂತ್, ಅಂಪೈರ್ ಮುಂದೆ ಚೆಂಡನ್ನು ನೆಲದ ಮೇಲೆ ಎಸೆಯುವ ಮೂಲಕ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು. ಇದಕ್ಕಾಗಿ ಪಂತ್​ಗೆ ವಾಗ್ದಂಡನೆ ವಿಧಿಸಲಾಗಿದೆ.

ತಪ್ಪನ್ನು ಒಪ್ಪಿಕೊಂಡ ಪಂತ್
ಐಸಿಸಿ ಪತ್ರಿಕಾ ಪ್ರಕಟಣೆಯ ಪ್ರಕಾರ, ರಿಷಭ್ ಪಂತ್ ಆ ಪ್ರಕರಣದಲ್ಲಿ ತನ್ನ ತಪ್ಪನ್ನು ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ಬಳಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಯ ಅಗತ್ಯವಿಲ್ಲ. ಆನ್-ಫೀಲ್ಡ್ ಅಂಪೈರ್‌ಗಳಾದ ಪಾಲ್ ರೈಫಲ್ ಮತ್ತು ಕ್ರಿಸ್ ಜಾಫ್ನಿ ಪಂತ್ ಅವರ ಪ್ರತಿಭಟನೆಯ ಬಗ್ಗೆ ಪಂದ್ಯದ ರೆಫರಿಗೆ ದೂರು ನೀಡಿದ್ದರು. ಅವರಲ್ಲದೆ, ಮೂರನೇ ಅಂಪೈರ್ ಶರ್ಫುದುಲ್ಲಾ ಮತ್ತು ನಾಲ್ಕನೇ ಅಂಪೈರ್ ಮೈಕ್ ಬರ್ನ್ಸ್ ಕೂಡ ಆರೋಪಗಳನ್ನು ಮಾಡಿದ್ದರು ಎಂದು ಐಸಿಸಿ ತಿಳಿಸಿದೆ.

ವಾಸ್ತವವಾಗಿ ಐಸಿಸಿ ನಿಯಮಗಳ ಹಂತ 1 ರ ಅಡಿಯಲ್ಲಿ ತಪ್ಪಿತಸ್ಥರೆಂದು ಕಂಡುಬಂದ ಆಟಗಾರರಿಗೆ ಕನಿಷ್ಠ ಶಿಕ್ಷೆ ವಾಗ್ದಂಡನೆಯಾಗಿದೆ. ಗರಿಷ್ಠ ಶಿಕ್ಷೆಯೆಂದರೆ ಅವರ ಪಂದ್ಯ ಶುಲ್ಕದಲ್ಲಿ ಶೇಕಡಾ 50 ರಷ್ಟು ಕಡಿತ ಮತ್ತು ಒಂದು ಅಥವಾ ಎರಡು ಡಿಮೆರಿಟ್ ಅಂಕಗಳನ್ನು ನೀಡಲಾಗುವುದು. ಇದೀಗ ಪಂತ್, ಹಂತ 1 ರ ಅಡಿಯಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದ್ದು, ವಾಗ್ದಂಡನೆ ವಿಧಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!