Friday, January 9, 2026

ಟಿ20 ವಿಶ್ವಕಪ್ ನಾವು ಶ್ರೀಲಂಕಾದಲ್ಲಿ ಆಡ್ತೇವೆ ಅಂದಿದ್ದಕ್ಕೆ ‘ನೋ’ ಎಂದ ICC!

ಹೊಸದಿಗಂತ ಡಿಜಿಟಲ್ ಡೆಸ್ಕ್:

2026ರ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ತಂಡ ಎಲ್ಲಿ ಆಡಲಿದೆ ಎಂಬ ಪ್ರಶ್ನೆ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಭಾರತದಲ್ಲಿ ನಡೆಯಲಿರುವ ಈ ಮಹತ್ವದ ಟೂರ್ನಿಯಲ್ಲಿ ಪಾಲ್ಗೊಳ್ಳಲು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಹಿಂಜರಿದಿದ್ದು, ತಮ್ಮ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸುವಂತೆ ಐಸಿಸಿಗೆ ಮನವಿ ಸಲ್ಲಿಸಿದೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಈ ಬೇಡಿಕೆಯನ್ನು ತಿರಸ್ಕರಿಸಿದೆ.

ಇತ್ತೀಚೆಗೆ ಐಪಿಎಲ್‌ನಿಂದ ಬಾಂಗ್ಲಾದೇಶ ವೇಗಿ ಮುಸ್ತಫಿಝುರ್ ರೆಹಮಾನ್ ಅವರನ್ನು ಕೈಬಿಟ್ಟ ಘಟನೆ ಬಳಿಕ ಈ ವಿವಾದ ಮತ್ತಷ್ಟು ತೀವ್ರವಾಗಿದೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆದ ದೌರ್ಜನ್ಯಗಳ ವಿರುದ್ಧ ಭಾರತದಲ್ಲಿ ಪ್ರತಿಭಟನೆಗಳು ನಡೆದಿದ್ದು, ಇದರ ಪರಿಣಾಮವಾಗಿ ಮುಸ್ತಫಿಝುರ್ ರನ್ನು ಕಣಕ್ಕಿಳಿಸಲು ವಿರೋಧ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಬಿಸಿಸಿಐ ಸೂಚನೆ ಮೇರೆಗೆ ಕೆಕೆಆರ್ ಫ್ರಾಂಚೈಸಿ ಅವರನ್ನು ತಂಡದಿಂದ ಹೊರಗಿಟ್ಟಿತ್ತು.

ಇದನ್ನೂ ಓದಿ: Rice series 11 | ಚಿತ್ರಾನ್ನ, ಪಲಾವ್ ತಿಂದು ಬೋರಾಗಿದ್ರೆ ಈ ಒಗ್ಗರಣೆ ಅನ್ನ ಒಮ್ಮೆ ಟ್ರೈ ಮಾಡಿ

ಈ ಬೆಳವಣಿಗೆಯ ಬಳಿಕ ಭಾರತದಲ್ಲಿ ತಮ್ಮ ಆಟಗಾರರಿಗೆ ಭದ್ರತೆ ಸಿಗುತ್ತದೆಯೇ ಎಂಬ ಪ್ರಶ್ನೆಯನ್ನು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಮುಂದಿಟ್ಟಿದೆ. ಭಾರತದಲ್ಲಿ ಒಬ್ಬ ಆಟಗಾರನಿಗೂ ರಕ್ಷಣೆ ಖಚಿತವಾಗದಿದ್ದರೆ, ಸಂಪೂರ್ಣ ತಂಡಕ್ಕೆ ಹೇಗೆ ಭದ್ರತೆ ಒದಗಿಸಲಾಗುತ್ತದೆ ಎಂಬುದು ಬಿಸಿಬಿಯ ಆತಂಕ.

ಐಸಿಸಿ ಭಾರತದಲ್ಲೇ ಟೂರ್ನಿ ಆಡಬೇಕು ಅಥವಾ ವಾಕ್‌ಓವರ್‌ ತೆಗೆದುಕೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ. ಆದರೂ ಬಾಂಗ್ಲಾದೇಶ ತನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಹೇಳಿದೆ. ಈ ಕುರಿತು ಮಾತನಾಡಿದ ಬಾಂಗ್ಲಾದೇಶದ ಕ್ರೀಡಾ ಸಲಹೆಗಾರ ಡಾ. ಆಸಿಫ್ ನಜ್ರುಲ್, ಇದು ಕೇವಲ ಭದ್ರತಾ ವಿಷಯವಲ್ಲ, ದೇಶದ ಘನತೆಯ ಪ್ರಶ್ನೆಯೂ ಹೌದು ಎಂದು ಹೇಳಿದ್ದಾರೆ. ಭಾರತದಲ್ಲಿ ಆಡದಿರಲು ಇದೇ ಕಾರಣ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

error: Content is protected !!