ರಸ್ತೆ ಅಪಘಾತಗಳು ಹೆಚ್ಚಾಗುವ ಸ್ಥಳಗಳನ್ನು ಗುರುತಿಸಿ: ಡಾ. ರಾಕೇಶ್ ಕುಮಾರ್ ಕೆ

ದಿಗಂತ ವರದಿ ರಾಮನಗರ :

ಜಿಲ್ಲೆಯಲ್ಲಿ ಹೆಚ್ಚು ರಸ್ತೆ ಅಪಘಾತವಾಗುವ (ಬ್ಲಾಕ್ ಸ್ಪಾಟ್) ಹಾಗೂ ರಸ್ತೆ ಅಪಘಾತದಿಂದ ಹೆಚ್ಚು ಜನರು ಮೃತರಾಗಿರುವ ಸ್ಥಳಗಳನ್ನು ಗುರುತಿಸಿ. ಸದರಿ ಸ್ಥಳಗಳಲ್ಲಿ ರಸ್ತೆ ಅಪಘಾತ ತಡೆಗಟ್ಟಲು ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿ, ತಡೆಗೋಡೆಗಳು, ರಸ್ತೆ ವಿಭಜಕಗಳಲ್ಲಿ ವಾಹನ ಸಂಚಾರ ಮಾಡಲು ತೊಂದರೆಯಾಗುವ ಗಿಡ, ಮರಗಳನ್ನು ತೆರವುಗೊಳಿಸುವುದು, ಸಂಚಾರಿ ಸಂಕೇತಗಳ ಅಳವಡಿಕೆ, ರಸ್ತೆ ದುರಸ್ತಿಗೊಳಿಸುವುದು ಇತ್ಯಾದಿ ಅಗತ್ಯ ಕಾಮಗಾರಿ ಕೈಗೊಳ್ಳುವ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ವಾಹನ ಚಾಲನೆ ಮಾಡುವಾಗ ಸಂಚಾರಿ ನಿಯಮಗಳನ್ನು ವಾಹನ ಚಾಲಕರು ಪಾಲಿಸಬೇಕು ಇಲ್ಲಾವದಲ್ಲಿ ಪೊಲೀಸ್ ಇಲಾಖೆಯವರು ಸೂಕ್ತ ದಂಡ ವಿಧಿಸಬೇಕು. ಮುಖ್ಯವಾಗಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು, ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸುವವರ ವಾಹನ ಚಾಲನಾ ಪರವಾನಗಿಯನ್ನು ಅಮಾನತ್ತು ಪಡಿಸಬೇಕು. ಸಂಚಾರಿ ನಿಯಮಗಳ ಬಗ್ಗೆ ಹೆಚ್ಚು ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಿದರು.
ಪೊಲೀಸ್ ನಿರೀಕ್ಷಕ  ಪುಟ್ಟೇಗೌಡ ಅವರು ಮಾತನಾಡಿ ಜಿಲ್ಲೆಯಲ್ಲಿ 2019 ರಲ್ಲಿ  381 ಜನ 2022 ರಲ್ಲಿ 292, 2021 ರಲ್ಲಿ 272 ಜನರು ರಸ್ತೆ ಅಪಘಾತದಲ್ಲಿ ಮೃತರಾಗಿದ್ದರೆ ಎಂದು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಹೆಚ್ಚು ಜನ ಮೃತರಾಗಿರುವ ಸ್ಥಳಗಳು ಹಾಗೂ ಕಾರಣಗಳನ್ನು ಪಟ್ಟಿ ಮಾಡಿ ಇದರಿಂದ ಇದಕ್ಕೆ ಸುಲಭವಾಗಿ ಮುಂದಿನ ದಿನಗಳಲ್ಲಿ ಅಪಘಾತವಾಗದಂತೆ ಕ್ರಮವಹಿಸಬಹುದು ಎಂದರು.
ಸಭೆಯಲ್ಲಿ ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ; ನಿರಂಜನ್, ರಾಮನಗರ ನಗರಸಭೆ ಆಯುಕ್ತ ನಂದ ಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!