Wednesday, December 3, 2025

‘ಇಡ್ಲಿ’ ಟು ‘ಬೆಳ್ಳುಳ್ಳಿ ಕಬಾಬ್ ಡಿನ್ನರ್’: ರಾಜ್ಯದಲ್ಲಿ ‘ಉಪಹಾರ ಇಲಾಖೆ’ ಸಕ್ರಿಯ: ನಿಖಿಲ್ ಲೇವಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಡುವಿನ ಇತ್ತೀಚಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್‌’ಗಳನ್ನು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ತೀವ್ರವಾಗಿ ಲೇವಡಿ ಮಾಡಿದ್ದಾರೆ. ರಾಜ್ಯದಲ್ಲಿ ಆಡಳಿತಕ್ಕಿಂತ ಹೆಚ್ಚಾಗಿ ‘ಉಪಹಾರ ಇಲಾಖೆ’ಯೇ ಸಕ್ರಿಯವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಬ್ರೇಕ್‌ಫಾಸ್ಟ್‌ಗೆ ಇಡ್ಲಿ, ಉಪ್ಪಿಟ್ಟು, ನಾಟಿ ಕೋಳಿ ಸಾರು ಆಯ್ತು. ಇನ್ನು ಡಿನ್ನರ್‌ಗೆ ಬೆಳ್ಳುಳ್ಳಿ ಕಬಾಬ್ ಸಹ ಬರಬಹುದೇನೋ. ಆದರೆ ವಾಸ್ತವವಾಗಿ ರಾಜ್ಯದಲ್ಲಿ ಉಪಹಾರ ಇಲಾಖೆ ಮಾತ್ರ ಸಂಪೂರ್ಣವಾಗಿ ಸಕ್ರಿಯವಾಗಿದೆ,” ಎಂದು ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜಾರಿಯಾಗದಿರುವ ಬಗ್ಗೆ ನಿಖಿಲ್ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಕ್ಕೆ ಪೂರ್ಣ ಬಹುಮತ ಬಂದಿದ್ದರೂ, ಎರಡು ವರೆ ವರ್ಷಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ, ಶಿಕ್ಷಕರ ನೇಮಕಾತಿ ಆಗುತ್ತಿಲ್ಲ ಮತ್ತು ಆರೋಗ್ಯ ಕ್ಷೇತ್ರಕ್ಕಾಗಿ ಸರಿಯಾಗಿ ಕೆಲಸ ಮಾಡುತ್ತಿಲ್ಲ.

“ಗ್ಯಾರಂಟಿಗಳನ್ನು ಪ್ರತಿ ತಿಂಗಳು ಸಮರ್ಪಕವಾಗಿ ಕೊಡುತ್ತಿಲ್ಲ. ಚುನಾವಣೆ ಹತ್ತಿರ ಬಂದಾಗ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಮಾಡುತ್ತಾರೆ. ಸರ್ಕಾರದ ಹಣವನ್ನು ಚುನಾವಣೆಗೆ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ,” ಎಂದು ವಾಗ್ದಾಳಿ ನಡೆಸಿದರು.

ಬೆಂಗಳೂರಿನ ಮೂಲಸೌಕರ್ಯಗಳ ಬಗ್ಗೆ ಮಾತನಾಡಿದ ಅವರು, ರಾಜಧಾನಿಯ ಸಮಸ್ಯೆಗಳನ್ನು ಸರ್ಕಾರ ನಿರ್ಲಕ್ಷಿಸಿದೆ ಎಂದು ದೂರಿದರು. “ಈ ಸರ್ಕಾರಕ್ಕೆ ಬೆಂಗಳೂರಿನಲ್ಲಿರುವ 15 ಸಾವಿರ ಗುಂಡಿಗಳನ್ನು ಮುಚ್ಚುವ ಯೋಗ್ಯತೆ ಇಲ್ಲ. ಗುಂಡಿಗಳಿಗೆ ಬಿದ್ದು ಸುಮಾರು 500-600 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರ ಹೊಣೆಯನ್ನು ಸರ್ಕಾರವೇ ಹೊರಬೇಕು,” ಎಂದು ಒತ್ತಾಯಿಸಿದರು. ಬೆಂಗಳೂರು ಹೆಚ್ಚಿನ ಆದಾಯ ನೀಡುತ್ತಿದ್ದರೂ, ರಸ್ತೆ ಯಾವುದು, ಪುಟ್‌ಪಾತ್ ಯಾವುದು ಎಂದು ಗುರುತಿಸಲಾಗದ ಪರಿಸ್ಥಿತಿ ಇದೆ ಎಂದು ಆಕ್ರೋಶ ಹೊರಹಾಕಿದರು.

ಇದೇ ವೇಳೆ ಕಾಂಗ್ರೆಸ್ ಪಕ್ಷದ ಆಂತರಿಕ ಕಲಹವನ್ನು ಉಲ್ಲೇಖಿಸಿ, “ಕಾಂಗ್ರೆಸ್‌ನಲ್ಲಿ ಸಹಿ ಹಾಕುವುದಕ್ಕೆ ಎ, ಬಿ, ಸಿ ಟೀಂ ಅಂತ ಶುರುವಾಗಿದೆ. ಹೈಕಮಾಂಡ್ ನಿಜವಾಗಿಯೂ ಇದ್ದರೆ, ಮೊದಲು ತಮ್ಮ ಪಕ್ಷದೊಳಗಿನ ಈ ಗೊಂದಲವನ್ನು ಸರಿಪಡಿಸಲಿ,” ಎಂದು ವ್ಯಂಗ್ಯಭರಿತ ಸವಾಲು ಹಾಕಿದರು.

error: Content is protected !!