ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಯೂನಿಯನ್ ಬ್ಯಾಂಕ್ ಅಧಿಕಾರಿಗಳ ತಪ್ಪು ಸಾಬೀತಾದರೆ ಕಠಿಣ ಕ್ರಮ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎಚ್ಚರಿಸಿದ್ದಾರೆ.
ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರದ ವಾಲ್ಮೀಕಿ ನಿಗಮದಲ್ಲಿ ಎಸ್ಸಿ-ಎಸ್ಟಿ ವರ್ಗಗಳ ಹಣ ಲೂಟಿ ಮಾಡಲಾಗಿದೆ. ಅವರ ಸಂಪುಟ ಸಚಿವರೇ ರಾಜೀನಾಮೆ ಕೊಟ್ಟಿದ್ದಾರೆ. ಅಕ್ರಮ ಆಗಿದ್ದು 187 ಕೋಟಿ ಅಲ್ಲ, 89 ಕೋಟಿ ಎಂದು ಸಿಎಂ ಅವರೇ ಹೇಳಿದ್ದಾರೆ. ಇಷ್ಟಾದರೂ ಹಣ ವರ್ಗಾವಣೆಗೆ ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಸಿದ್ದರಾಮಯ್ಯ ಹಾಗೆ ಹೇಳೋದು ಅವರ ಚಾಣಾಕ್ಷತೆ ಅಂತ ಅಂದುಕೊಂಡಿದ್ದಾರೆ ಎಂದು ಕುಟುಕಿದ್ದಾರೆ.
ಈ ಹಣದ ದರೋಡೆಗೆ ಹೊಣೆ ಯಾರು? ರಾಷ್ಟ್ರೀಯ ಬ್ಯಾಂಕ್ಗಳ ಅಧಿಕಾರಿಗಳು ತಪ್ಪು ಮಾಡಿದ್ದರೆ ಕ್ರಮ ಆಗಲಿ. ಈಗಾಗಲೇ ಯೂನಿಯನ್ ಬ್ಯಾಂಕ್ ಅಧಿಕಾರಿಗಳ ಮೇಲೆ ತನಿಖೆ ನಡೆಯುತ್ತಿದೆ. ತನಿಖೆ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಅಧಿಕಾರಿಗಳು ತಪ್ಪು ಮಾಡಿದ್ದರೆ ಕ್ರಮ ಖಚಿತ. ಆದರೆ ರಾಜ್ಯ ಸರ್ಕಾರ ಅವರ ಸಚಿವರಾಗಿದ್ದವರ ಮೇಲೆ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.
ಕೇಂದ್ರದಿಂದ ಇಡಿ ದುರ್ಬಳಕೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿ, ಇಡಿ ಇಲ್ಲಿಗೆ ಬಂದು ಕಪ್ಪು ಹಣ ಪತ್ತೆ ಮಾಡಿ ತನಿಖೆ ಮಾಡುತ್ತಿದೆ. ಕಾಂಗ್ರೆಸ್ ಅವರಿಗೆ ಇದು ಇಷ್ಟ ಆಗಲ್ಲ ಅಂತ ಇಡಿಯವರು ಬರದೇ ಇರೋಕ್ಕಾಗುತ್ತಾ? ಇಡಿಯವರು ತಮ್ಮ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕೇಂದ್ರ ಸ್ವಾತಂತ್ರ್ಯ ಕೊಟ್ಟಿದೆ ಎಂದು ಟಕ್ಕರ್ ಕೊಟ್ಟರು.