ಹೊಸದಿಗಂತ ವರದಿ, ಹಾಸನ :
ಸಿಎಂ ಇಬ್ರಾಹಿಂ ಕಾಂಗ್ರೆಸ್‌ಗೆ ಹೋಗುವುದಾದರೆ ಹೋಗಲಿ, ನನ್ನದೇನು ಅಭ್ಯಂತರವಿಲ್ಲ. ಹೆಚ್.ಡಿ.ದೇವೇಗೌಡರು ಕುಳಿತುಕೊಂಡು ತೀರ್ಮಾನ ಮಾಡುತ್ತಾರೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ದೇವೇಗೌಡರನ್ನು ಅರವತ್ತು ವರ್ಷ ಕಾಂಗ್ರೆಸ್ ಹೇಗೆ ನೆಡೆಸಿಕೊಂಡಿತು ಎಂದು ನಮಗೆ ಗೊತ್ತಿದೆ. ಕೋಮುವಾದಿ ದೂರವಿಡಬೇಕು ಅಂತ ನಮ್ಮ ಜೊತೆ ಬರುತ್ತಾರೆ. ದೇವೇಗೌಡರು, ಕುಮಾರಸ್ವಾಮಿ ಮಗನನ್ನು ಸೋಲಿಸಿದವರು ಯಾರು ? ಅಂತಹ ಕಾಂಗ್ರೆಸ್‌ಗೆ ಸಿ.ಎಂ ಇಬ್ರಾಹಿಂ ಹೋಗಿ ಬೀಳ್ತಿವಿ ಅಂದರೆ ನಮಗೇನು ಅಭ್ಯಂತರ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸಿಪಿಎಂ ಮುಗಿಸಿ ಆಯ್ತು, ಈಗ ನಮ್ಮ ಹತ್ರ ಬಂದಿದ್ದಾರೆ, ಇವತ್ತು ಒರಿಜಿನಲ್ ಕಾಂಗ್ರೆಸ್ ಇಲ್ಲವಾಗಿದೆ. ನೆಹರು, ಗಾಂಧಿ ಕಾಲದ ಕಾಂಗ್ರೆಸ್ ಈಗಿಲ್ಲವಾಗಿದೆ. ಇಂತಹ ಕಾಂಗ್ರೆಸ್‌ಗೆ ಹೆದರುವುದಾದರೆ ಮನೆ ಸೇರಿಕೊಳ್ಳಬೇಕಾಗುತ್ತದೆ, ಕಾಂಗ್ರೆಸ್‌ನ ಇಂತಹ ಕುತಂತ್ರಕ್ಕೆ ನಾವು ಹೆದರುವುದಿಲ್ಲ, ಸ್ವಲ್ಪ ದಿನ ತಡೆಯಿರಿ ಕಾಲವೇ ನಿರ್ಧರಿಸುತ್ತದೆ ಎಂದು ಹೇಳಿದರು.
ಜೆಡಿಎಸ್ ಇಬ್ಭಾಗ ಆಗಲ್ಲ, ನಾವು ಹತ್ತೊಂಭತ್ತು ಜನ ಶಾಸಕರು ಇದ್ದೇವೆ. ದೇವೇಗೌಡರು, ಕುಮಾರಸ್ವಾಮಿ ಈ ಪಕ್ಷಕ್ಕಾಗಿ ಏನೇನ್ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಎಲ್ಲವನ್ನು ದೇವೇಗೌಡರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.