ಐದು ವರ್ಷ ಕಾಂಗ್ರೆಸ್‌ ಅಧಿಕಾರದಲ್ಲಿದ್ರೆ ಸಾಲದ ಪ್ರಮಾಣ 10 ಲಕ್ಷ ಕೋಟಿ ದಾಟಲಿದೆ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ಹೊಸದಿಗಂತ ವರದಿ ಹಾಸನ:

ಈ ಸರಕಾರ ಇನ್ನೂ 5 ವರ್ಷ ಇದ್ದರೆ ರಾಜ್ಯದ ಸಾಲದ ಪ್ರಮಾಣ 10 ಲಕ್ಷ ಕೋಟಿ ರೂಪಾಯಿ ಗಡಿ ದಾಟಬಹುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಹಾಸನದಲ್ಲಿ ಇಂದು ಪಕ್ಷದ ಶಾಸಕರ ಜತೆಯಲ್ಲಿ ಹಾಸನಾಂಬೆ ದರ್ಶನ ಪಡೆದ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಆರ್ಥಿಕವಾಗಿ ಅಪಾಯದ ಪರಿಸ್ಥಿತಿ ಎದುರಿಸುತ್ತಿದೆ. ಅಸಮರ್ಪಕ ನಿರ್ವಹಣೆಯಿಂದ ರಾಜ್ಯವನ್ನು ಕಾಂಗ್ರೆಸ್ ಸರ್ಕಾರ ದೊಡ್ಡ ಪ್ರಮಾಣದ ಸಾಲದ ಸುಳಿಗೆ ಸಿಲುಕಿಸುವ ಅಪಾಯವಿದೆ ಎಂದರು.

135 ಸ್ಥಾನ ಸಿಕ್ಕರೂ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ನಗಬೇಕೊ, ಅಳಬೇಕೋ ಗೊತ್ತಾಗುತ್ತಿಲ್ಲ. ಬರಗಾಲಕ್ಕೆ ಸಂಬಂಧಿಸಿದಂತೆ ಲಘುವಾಗಿ ಮಾತನಾಡಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಹೆಚ್‌.ಡಿ ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.

ಒಂದು ಗ್ಯಾರಂಟಿ ಜಾರಿ ಆಗಿಲ್ಲ. ಜಾರಿ ಆಗಿರುವ ಗ್ಯಾರಂಟಿಗಳಿಂದ ಜನರಿಗೆ ಉಪಯೋಗ ಆಗುತ್ತಿಲ್ಲ. ಪ್ರಚಾರದಲ್ಲಿ ಈ ಸರಕಾರ ಕಾಲ ಕಳೆಯುತ್ತಿದೆ ಎಂದು ಅವರು ಕಟುವಾಗಿ ಟೀಕಿಸಿದರು.

ಹಾಸನದಲ್ಲಿ ಗೃಹಲಕ್ಷ್ಮಿ ಯೋಜನೆ 90% ಮಹಿಳೆಯರಿಗೆ ತಲುಪಿಲ್ಲ ಎಂದು ಅಧಿಕಾರಿಗಳ ಜತೆ ನಿನ್ನೆಯ ದಿನ ಸಿಎಂ ಚರ್ಚೆ ನಡೆಸಿದ್ದಾರೆ. ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಮಾತ್ರ ಕಾಣುವುದು ಎನ್ನುವ ಶಾಸಕ ಶಿವಲಿಂಗೇಗೌಡ ಅವರ ಅರಸಿಕೆರೆ ಕ್ಷೇತ್ರದಲ್ಲಿಯೇ ಈ ಸರಕಾರದ ಕನಸಿನ ಯೋಜನೆ ಗೃಹಲಕ್ಷ್ಮಿ ಯಶಸ್ವಿಯಾಗಿ ತಲುಪಿಲ್ಲ ಎಂದು ಅಧಿಕಾರಿಗಳ ಜತೆ ಚರ್ಚೆ ಸ್ವತಃ ಸಿಎಂ ನಡೆಸಿದ್ದಾರೆ. ಈ ಗ್ಯಾರಂಟಿಗಳ ಹಣೆಬರಹ ಏನಾಗಿದೆ ಎನ್ನುವುದು ಇದರಿಂದ ತಿಳಿಯುತ್ತದೆ ಎಂದು ಹೇಳಿದರು.

ಶಕ್ತಿ ಯೋಜನೆಗೆ ಹಣ ಒದಗಿಸಬೇಕಾದ ಜವಾಬ್ದಾರಿ ಸರಕಾರದ ಮೇಲಿದೆ. ಈಗಾಗಲೇ ಆ ದುಡ್ಡು ಸ್ವಾಹಾ ಆಗುತ್ತಿದೆ. ಶಕ್ತಿ ಯೋಜನೆಯಡಿ ಬಸ್‌ಗಳಲ್ಲಿ ಹೆಣ್ಣುಮಕ್ಕಳ ಹೆಸರಲ್ಲಿ ಬೇಕಾಬಿಟ್ಟಿ ಟಿಕೆಟ್ ಹರಿಯಲಾಗುತ್ತಿದೆ, ವಿಡಿಯೋಗಳೆ ಸಾಕ್ಷಿಗೆ ಇವೆ. ಈ ಯೋಜನೆಯಡಿ ಪ್ರಯಾಣಿಕರ ಸಂಖ್ಯೆ ಏರುತ್ತಿದೆಯೋ? ಅಥವಾ ನಿಮ್ಮ ಸರಕಾರ ಮತ್ತು ಅಧಿಕಾರಿಗಳು ಹೆಣ್ಣುಮಕ್ಕಳ ಪ್ರಯಾಣದ ಸುಳ್ಳು ಲೆಕ್ಕ ತೋರಿಸಿ ಆ ಟಿಕೆಟ್ ಹಣವನ್ನು ಯಾವ ರಾಜ್ಯಕ್ಕೆ ಕಳುಹಿಸುತ್ತಿದ್ದಿರೋ? ಇದು ನಿಮ್ಮ ಸರಕಾರದ ಕಾರ್ಯಕ್ರಮಗಳ ದುಸ್ಥಿತಿ. ಇಂದಿರಾ ಕ್ಯಾಂಟಿನ್ ಗತಿ ಕೂಡ ಇದೇ ಆಗಿದೆ ಎಂದು ಅವರು ಕಿಡಿ ಕಾರಿದರು.

ಬಿಜೆಪಿಯವರು 25 ಜನ ಇದ್ದಾರೆ, ಕೇಂದ್ರದಿಂದ ಅನುದಾನ ತರಲಿ ಎನ್ನುವ ಕಾಂಗ್ರೆಸ್ ಪಕ್ಷವು ಮೊದಲು ರಾಜ್ಯ ಸರಕಾರದ ಬಗ್ಗೆ ಮಾತನಾಡಲಿ. ಮೊದಲು ನಿಮ್ಮ ಕೆಲಸ ನೀವು ಮಾಡಿ‌ ಎಂದು ಕುಟುಕಿದ ಅವರ, ಬರ ವೀಕ್ಷಣೆಗೆ ಅಂತ ಟಾಸ್ಕ್ ಫೋರ್ಸ್ ಸಿದ್ದ ಮಾಡಿದ್ದಾರೆ. ಇದು ಬರ ವೀಕ್ಷಣೆಗೆ ಅಂತ ಸಿದ್ದಗೊಳಿಸಿರುವ ತಂಡವಲ್ಲ, ಯಾವ ಜಿಲ್ಲೆಯಲ್ಲಿ ಯಾರು ಸಮರ್ಥ ನಾಯಕರಿದ್ದಾರೆ, ಅವರನ್ನು ಹುಡುಕಿ ಅವರನ್ನು ಹೇಗೆ ಬಲೆಗೆ ಕೆಡವಬೇಕು ಎಂದು ಹೇಳಿ ಕಳಿಸಿಕೊಟ್ಟ ತಂಡಗಳಿವು ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಹಿರಿಯ ಶಾಸಕ ಹಾಗೂ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ, ಹಾಸನ ಶಾಸಕ ಸ್ವರೂಪ್ ಪ್ರಕಾಶ್, ಮಾಜಿ ಸಚಿವ ವೆಂಕಟರಾವ್ ನಾಡಗೌಡ ಸೇರಿದಂತೆ ಪಕ್ಷದ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಹಿರಿಯ ನಾಯಕರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!