ಹೊಸದಿಗಂತ ಡಿಜಿಟಲ್ ಡೆಸ್ಕ್:
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪ್ರಯಾಣಿಕರು ಟಿಕೆಟ್ ಬುಕ್ಕಿಂಗ್ ವೇಳೆ ಆಹಾರ ಆಯ್ಕೆ ಮಾಡಲು ಮರೆತರೆ ಇನ್ನು ಚಿಂತೆ ಮಾಡಬೇಕಿಲ್ಲ. ಪ್ರಯಾಣದ ವೇಳೆ ರೈಲಿನಲ್ಲಿ ಆಹಾರ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ರೈಲ್ವೆ ಮಂಡಳಿ ಹೇಳಿದೆ.
ಟಿಕೆಟ್ ಬುಕ್ಕಿಂಗ್ ವೇಳೆ ಆಹಾರ ಆಯ್ಕೆ ಮಾಡಿರದಿದ್ದರೆ ಹಣ ಪಾವತಿಸುತ್ತೇವೆಂದರೂ ಐಆರ್‌ಸಿಟಿಸಿ ಸಿಬ್ಬಂದಿ ಆಹಾರ ನೀಡಲು ನಿರಾಕರಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದ ಬೆನ್ನಿಗೇ ಐಆರ್‌ಸಿಟಿಸಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ರೈಲ್ವೆ ಮಂಡಳಿ ಈ ಆದೇಶ ನೀಡಿದೆ.
ವಂದೇ ಭಾರತ್‌ನಲ್ಲಿ ಪ್ರಯಾಣದ ವೇಳೆ ಎಲ್ಲರೂ ಬೇಯಿಸಿದ ಆಹಾರ, ರೆಡಿ ಟು ಈಟ್ ಆಹಾರ ಖರೀದಿಸಲು ಅವಕಾಶವಿದೆ. ಪೂರ್ವ ಪಾವತಿ ಮಾಡಿರುವ ಆಹಾರವನ್ನು ಪ್ರಯಾಣಿಕರಿಗೆ ನಿಗದಿತ ಸಮಯದೊಳಗೆ ವಿತರಿಸಬೇಕು. ಪ್ರಯಾಣಿಕರಿಗೆ ಕಿರಿಕಿರಿಯಾಗಬಾರದು ಎಂಬ ಕಾರಣಕ್ಕೆ ರಾತ್ರಿ 9 ಗಂಟೆಯ ನಂತರ ಆಹಾರ ಪೂರೈಕೆ, ಮಾರಾಟ ಮಾಡಲು ಅವಕಾಶವಿಲ್ಲ ಎಂದೂ ಮಂಡಳಿ ಹೇಳಿದೆ.