ಹೊಸದಿಗಂತ ವರದಿ, ವಿಜಯಪುರ:
ಆ. 19 ರೊಳಗಾಗಿ ಒಳ ಮೀಸಲಾತಿ ಜಾರಿ ಮಾಡದಿದ್ದರೆ ಉಗ್ರ ಹೋರಾಟ ಮಾಡಲಾಗುತ್ತದೆ. ರಾಜ್ಯದಲ್ಲಿ ರಕ್ತಕ್ರಾಂತಿ ಆಗುತ್ತೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ನಾಯಕರುಗಳನ್ನ ರಸ್ತೆ ಮೇಲೆ ತಿರುಗಾಡಲು ಬಿಡೋದಿಲ್ಲ. ನಾವು ಯಾವುದೇ ಸಮಾಜದ ವಿರುದ್ಧವಲ್ಲ. ನಮ್ಮ ಹಕ್ಕು ನಮಗೆ ಕೊಡಿ. ನುಡಿದಂತೆ ನಡೆದ ಸರ್ಕಾರ ಅಂತಿರಾ.
ಆದರೆ ಒಳ ಮೀಸಲಾತಿ ಯಾಕೆ ಜಾರಿ ಮಾಡುತ್ತಿಲ್ಲ. ನುಡಿದಂತೆ ನಡೆಯದ ಸರ್ಕಾರದ ನಾಲಿಗೆ ಕತ್ತರಿಸಿಕೊಳ್ಳಬೇಕು ಎಂದು ಹರಿಹಾಯ್ದರು.
ಮೀಸಲಾತಿಯಲ್ಲಿ ಎಸ್‌ಸಿ 101 ಹಾಗೂ ಎಸ್‌ಟಿ 56 ಜಾತಿಗಳಿವೆ. ಒಳ ಮೀಸಲಾತಿ ವಿಚಾರವಾಗಿ 2004 ರಲ್ಲಿ ಸದಾಶಿವ ಆಯೋಗ ನೇಮಕ ಮಾಡಲಾಗಿತ್ತು. ಆದರೆ ಅದಕ್ಕೆ ಎಸ್.ಎಂ. ಕೃಷ್ಣಾ ಸರ್ಕಾರ ಹಣ ನೀಡಿರಲಿಲ್ಲ. ಬಿ.ಎಸ್. ಯಡಿಯೂರಪ್ಪ ಸರ್ಕಾರ 13 ಕೋಟಿ ನೀಡಿದ ಬಳಿಕ ಗಣತಿ ಆರಂಭವಾಯಿತು. ನಮ್ಮ ಅವಧಿಯಲ್ಲಿ ಸದಾಶಿವ ಆಯೋಗ ವರದಿ ಜಾರಿ ಮಾಡಲು ಆಗಲಿಲ್ಲ. ನಮಗೆ ಬಹುಮತ ಇಲ್ಲದ ಕಾರಣ ಮೀಸಲಾತಿ ಒಪ್ಪಲು ಆಗಲಿಲ್ಲ. 2013 ರಲ್ಲಿ ಕಾಂಗ್ರೆಸ್ ಪಕ್ಷ ಮೀಸಲಾತಿ ನೀಡೋದಾಗಿ ಹೇಳಿತ್ತು. ಆದರೆ ಅಧಿಕಾರಕ್ಕೆ ಬಂದು ಎಸ್‌ಸಿ ಸಮುದಾಯದಲ್ಲಿ ಜಗಳ ಹಚ್ಚುವ ಕೆಲಸ ಮಾಡಿದರು ಎಂದರು.
ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದ ಬಳಿಕ ಕೋರ್ಟ್ ಆದೇಶ ನೀಡಿದೆ. ಸುಪ್ರೀಂಕೋರ್ಟ್ ಆದೇಶದ ಬಳಿಕ ತೆಲಂಗಾಣ, ಆಂಧ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಒಳ ಮೀಸಲಾತಿ ಜಾರಿ ಮಾಡಲಾಗಿದೆ. ಕರ್ನಾಟಕದಲ್ಲಿ ನಾಗಮೋಹನ್ ದಾಸ ವರದಿ ಯಾಕೆ ಜಾರಿ ಮಾಡುತ್ತಿಲ್ಲ. ದೇಶದ ಹಲವು ಕಡೆ ಒಳ ಮೀಸಲಾತಿ ಜಾತಿ ಮಾಡಲಾಗಿದೆ. ಕರ್ನಾಟಕದಲ್ಲಿ ಯಾಕೆ ಜಾರಿ ಮಾಡುತ್ತಿಲ್ಲ ?, ನಾಗಮೋಹನ ದಾಸ್ ಆಯೋಗದ ವರದಿಯಲ್ಲಿ ಬೇಕಾದರೆ ತಿದ್ದುಪಡಿ ಮಾಡಿ. ತಿದ್ದುಪಡಿ ಮಾಡಿದರೂ ನಮ್ಮ ಅಭ್ಯಂತರವಿಲ್ಲ ಎಂದರು.
ದಲಿತರು ಹೊಡೆದಾಡಿಕೊಳ್ಳಲಿ ಎಂದು ಕಾಂಗ್ರೆಸ್ ನಾಟಕ ಮಾಡುತ್ತಿದೆ. ತಪ್ಪು ಅಂಕಿ ಸಂಖ್ಯೆಗಳನ್ನ ಬಹಿರಂಗ ಮಾಡಿ ಜಗಳ ಹಚ್ಚುವ ಕೆಲಸ ಸರ್ಕಾರ ಮಾಡುತ್ತಿದೆ. ಇಂದು ನಡೆಯಬೇಕಿದ್ದ ಸಂಪುಟ ಸಭೆ ಮುಂದೂಡಿದ್ದು ಯಾಕೆ ?, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಾಚಿಕೆಯಾಗಬೇಕು. ಯಾಕೆ ಒಳ ಮೀಸಲಾತಿ ಒಪ್ಪುತ್ತಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.
ಸಚಿವ ಸ್ಥಾನದಿಂದ ರಾಜಣ್ಣ ವಜಾ ವಿಚಾರಕ್ಕೆ ಪ್ರತಿಕ್ರಿಯಿಸಿ, ಸತ್ಯ ಹೇಳಿದ್ದಕ್ಕೆ ರಾಜಣ್ಣ ವಜಾ. ರಾಹುಲ್ ಗಾಂಧಿ ಮೆಚ್ಚಿಸಲು ರಾಜಣ್ಣ ವಜಾ ಮಾಡಲಾಗಿದೆ. ರಾಯರೆಡ್ಡಿ, ಬಿ.ಆರ್. ಪಾಟೀಲ್ ಆಳಂದ, ಶಿವಗಂಗ, ರಾಜು ಕಾಗೆ ಸತ್ಯ ಹೇಳಿದ್ದಾರೆ ಯಾಕೆ ವಜಾ ಮಾಡಿಲ್ಲ ?, ರಾಜಣ್ಣ ಮಾತ್ರ ವಜಾ ಮಾಡಿದ್ಯಾಕೆ ?, ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾರೆ ಎಂದು ದೂರಿದರು.
ಆದರೆ ಸತ್ಯ ಹೇಳಿದ ಉಳಿದವರ ವಜಾ ಆಗಿಲ್ಲ. ವಸತಿ ಸಚಿವರಿಗೂ ವಜಾ ಮಾಡಬೇಕಿತ್ತಲ್ಲ, ಯಾಕೆ ಮಾಡಲಿಲ್ಲ ?, ಹೌಸಿಂಗ್ ಗೋಲ್ಮಾಲ್ ಬಗ್ಗೆ ಮಾತನಾಡಿದವರನ್ನಾದರೂ ವಜಾ ಮಾಡಬೇಕಿತ್ತಲ್ಲ. ರಾಜಣ್ಣ ದಲಿತ ಅನ್ನೋ ಕಾರಣಕ್ಕೆ ವಜಾ ಮಾಡಿದ್ದಾರೆ ಎಂದರು.