ನನ್ನನ್ನು ಬಿಟ್ಟರೆ ಇವತ್ತೇ ಸುವರ್ಣ ಸೌಧದಿಂದ ಸಾವರ್ಕರ್ ಫೋಟೋವನ್ನು ತೆಗೆದು ಹಾಕುತ್ತೇನೆ: ಸಚಿವ ಪ್ರಿಯಾಂಕ್ ಖರ್ಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನನ್ನನ್ನು ಬಿಟ್ಟರೆ ಇವತ್ತೇ ನಾನು ಬೆಳಗಾವಿಯ ಸುವರ್ಣ ಸೌಧದಲ್ಲಿ ಅಳವಡಿಕೆ ಮಾಡಲಾಗಿರುವ ಸಾವರ್ಕರ್ ಫೋಟೋವನ್ನು ತೆಗೆದು ಹಾಕುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುವರ್ಣ ಸೌಧದಿಂದ ಸಾವರ್ಕರ್ ಫೋಟೋ ತೆಗೆಯುವುದು ಸೂಕ್ತವೆನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಯಾವ ತತ್ವ ಸಿದ್ಧಾಂತದಲ್ಲಿ ಸಮಾನತೆ ಕಾಣಲ್ಲ ಅದನ್ನ ನಾನು ಒಪ್ಪಲ್ಲ.ಯಾವ ತತ್ವ ಸಿದ್ಧಾಂತದ ಪ್ರೇರಿತವಾಗಿ ಗಾಂಧೀಜಿ ಹತ್ಯೆಯಾಗಿದೆ ಅದನ್ನ ಒಪ್ಪಲ್ಲ. ‘ನನ್ನ ಬಿಟ್ರೆ ಇವತ್ತೆ ತೆಗೀತೀನಿ’. ನಿಯಮಾನುಸಾರವಾಗಿ ಮಾಡಬೇಕು. ಸ್ಪೀಕರ್ ಅವರ ನಿರ್ಧಾರ ನೋಡೊಣ. ನಾನು ಸಂವಿಧಾನ ನಂಬಿರೋ ವ್ಯಕ್ತಿ ಎಂದು ಹೇಳಿದರು.

ಕಳೆದ ಬಾರಿ ಸಾವರ್ಕರ್ ಫೋಟೋ ಹಾಕಿದಾಗ ಬಿಜೆಪಿಯವರಿಗೆ ಪ್ರಶ್ನೆ ಕೇಳಿದ್ದೆ ಇದುವರೆಗೂ ಅವರು ಉತ್ತರ ಕೊಟ್ಟಿಲ್ಲ. ವೀರ್ ಸಾವರ್ಕರ್ ಹೆಸರಿಗೆ ವೀರ್ ಹೇಗೆ ಬಂತು? ಬ್ರಿಟೀಷರ ಬಳಿ ಸಾವರ್ಕರ್ ಪಿಂಚಣಿ ಪಡೆಯುತ್ತಿರಲಿಲ್ವಾ? ಅವರ ಮನೆಯವರು ಕ್ಷಮಾಪಣೆ ಅರ್ಜಿ ಹಾಕಿದ್ರಾ ಇಲ್ಲವಾ? ಸುಭಾಷ್ ಚಂದ್ರ ಬೋಸ್ ಇಂಡಿಯನ್ ನ್ಯಾಷನಲ್ ಆರ್ಮಿ ಮಾಡಿದ್ರು, ಅದಕ್ಕೆ ನೊಂದಣಿ ಮಾಡಿಕೊಳ್ಳಲು ಸೇರಿದ್ರಾ ಇಲ್ಲವಾ ಸಾವರ್ಕರ್ ಅವರಿಗೆ ಗೋ ಮಾತಾ ಅಭಿಪ್ರಾಯ ಏನಿತ್ತು? ನಾನು ಅವರ ಐಡಿಯಾಲಜಿ ವಿರುದ್ಧ ಇದ್ದೇನೆ‌. ಅವರ ತತ್ವದ ಮೇಲೆ ನನಗೆ ನಂಬಿಕೆ ಇಲ್ಲ. ಅವರ ಫೋಟೋ ತೆಗೆಯೋ ಬಗ್ಗೆ ಸಿಎಂ ಗೂ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ನೆಹರು ಫೋಟೋ ಹಾಕ್ತೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ನೆಹರೂ ಅವರ ಫೊಟೋ ಹಾಕಲೇಬೇಕು‌. ಅವರು 3,000 ದಿನ ಜೈಲಲ್ಲಿ ಇದ್ದವರು. ದೇಶದ ಮೊದಲ ಪ್ರಧಾನಿ ಆಗಿದ್ದಾರೆ. 16 ವರ್ಷ ದೇಶವನ್ನ ಆಳಿದ್ದಾರೆ. ನಾವು ಆರ್ಥಿಕವಾಗಿ ಸದೃಢವಾಗಿದ್ದೇವೆ ಅಂತ ಹೇಳ್ತಿದ್ದಾರಲ್ಲ. ಮೋದಿ ವಿಶ್ವಗುರು ಅಂತ ಹೇಳ್ತಿದ್ದಾರಲ್ಲ. ಅದಕ್ಕೆ ಅಡಿಪಾಯ ಹಾಕಿದ್ದೇ ನೆಹರು. ಚಂದ್ರಯಾನ, ಸೂರ್ಯಯಾನ ಅಂತ ಬೆನ್ನು ತಟ್ಟಿಕೊಂಡು ಓಡಾಡ್ತಿದ್ದಾರಲ್ಲಾ? ಇಸ್ರೋ ಸ್ಥಾಪಿಸಿದ್ದು ಯಾರು? ಹೀಗಾಗಿ, ನೆಹರು ಅವರ ಫೊಟೋ ಹಾಕಲೇಬೇಕು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!