ಹೊಸದಿಗಂತ ಡಿಜಿಟಲ್ ಡೆಸ್ಕ್:
1993 ರಲ್ಲಿ ಮುಂಬೈನಲ್ಲಿ ನಡೆದ ಬಾಂಬ್ ದಾಳಿ ಸಮಯ ಬಾಲಿವುಡ್ನ ಸ್ಟಾರ್ ನಟ ಸಂಜಯ್ ದತ್ ಮನಸ್ಸು ಮಾಡಿದ್ದರೆ ಬರೋಬ್ಬರಿ 267 ಮಂದಿಯ ಪ್ರಾಣ ಉಳಿಸಬಹುದಾಗಿತ್ತು ಎಂದು ವಿಶೇಷ ಸಾರ್ವಜನಿಕ ಅಭಿಯೋಜಕ, ರಾಜ್ಯಸಭಾ ನಾಮನಿರ್ದೇಶಿತರೂ ಆಗಿರುವ ಉಜ್ವಲ್ ನಿಕಮ್ ಹೇಳಿದ್ದಾರೆ.
1993 ರಲ್ಲಿ ಮುಂಬೈನಲ್ಲಿ ನಡೆದ ಬಾಂಬ್ ದಾಳಿ ಪ್ರಕರಣ ಕುರಿತಾಗಿ ಸರ್ಕಾರ ಪರ ವಾದ ಮಂಡಿಸಿದ್ದ ಉಜ್ವಲ್ ನಿಕಮ್, ಸಂದರ್ಶನವೊಂದರಲ್ಲಿ ಮಾತನಾಡಿ ಸಂಜಯ್ ದತ್ ಪ್ರಕರಣದ ಬಗ್ಗೆಯೂ ಉಲ್ಲೇಖ ಮಾಡಿದ್ದಾರೆ.
ಅಂದು ಭಯೋತ್ಪಾದಕ ಮತ್ತು ವಿಧ್ವಂಸಕ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (TADA) ಅಡಿಯಲ್ಲಿ ಭಯೋತ್ಪಾದಕ ಎಂಬ ಆರೋಪದಿಂದ ನ್ಯಾಯಾಲಯವು ಸಂಜಯ್ ದತ್ ಅವರನ್ನು ಖುಲಾಸೆಗೊಳಿಸಿತ್ತು ಆದರೆ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಅವರನ್ನು ದೋಷಿ ಎಂದು ಘೋಷಿಸಿತ್ತು. ನಂತರ, ಸುಪ್ರೀಂ ಕೋರ್ಟ್ ಅವರಿಗೆ ವಿಧಿಸಲಾಗಿದ್ದ 6 ವರ್ಷಗಳ ಶಿಕ್ಷೆಯನ್ನು 5 ವರ್ಷಗಳಿಗೆ ಇಳಿಸಿತ್ತು. ಸಂಜಯ್ ದತ್ ಪುಣೆಯ ಯರವಾಡ ಜೈಲಿನಲ್ಲಿ ಈ ಶಿಕ್ಷೆಯನ್ನು ಪೂರ್ಣಗೊಳಿಸಿದ್ದರು.
ಆದ್ರೆ ನಿಜವಾಗಿಯೂ ಸಂಜಯ್ ದತ್ ಈ ಪ್ರಕರಣದಲ್ಲಿ ಅಮಾಯಕ. ಆತನಿಗೆ ಗನ್‌ಗಳ ಬಗ್ಗೆ ಆಸಕ್ತಿ ಇದ್ದ ಕಾರಣ ಅದನ್ನು ಇಟ್ಟುಕೊಂಡಿದ್ದರು. ಕಾನೂನಿನ ಕಣ್ಣಲ್ಲಿ ಅಪರಾಧ ಎಸಗಿದ್ದಾರೆ. ಆದರೆ ಅವರು ನೇರವಾದ ವ್ಯಕ್ತಿತ್ವ ಉಳ್ಳವರು. ನನ್ನ ದೃಷ್ಟಿಯಲ್ಲಿ ಆತ ನಿರಪರಾಧಿ ಎಂದಿದ್ದಾರೆ.
ಮಾರ್ಚ್ 12 ರಂದು ಸ್ಫೋಟ ಸಂಭವಿಸಿತ್ತು. ಅದಕ್ಕೂ ಕೆಲವು ದಿನಗಳ ಮೊದಲು ಸಂಜಯ್ ದತ್ ಮನೆಗೆ ವ್ಯಾನ್‌ವೊಂದು ಬಂದಿತ್ತು. ಹ್ಯಾಂಡ್ ಗ್ರೆನೇಡ್‌ಗಳು, ಎಕೆ 47 ಅದರಲ್ಲಿದ್ದವು. ಅಬು ಸಲೇಂ (ದಾವೂದ್ ಇಬ್ರಾಹಿಂನ ಸಹಾಯಕ) ಅದನ್ನು ತಂದಿದ್ದ. ಸಂಜಯ್ ಕೆಲವು ಹ್ಯಾಂಡ್ ಗ್ರೆನೇಡ್‌ಗಳು ಮತ್ತು ಬಂದೂಕುಗಳನ್ನು ಆರಿಸಿಕೊಂಡರು. ನಂತರ ಅವುಗಳನ್ನೆಲ್ಲಾ ಹಿಂತಿರುಗಿಸಿ ಒಂದೇ ಒಂದು ಎಕೆ 47 ಅನ್ನು ಮಾತ್ರ ಇಟ್ಟುಕೊಂಡರು. ಆ ಸಮಯದಲ್ಲಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರೆ, ಪೊಲೀಸರು ತನಿಖೆ ನಡೆಸುತ್ತಿದ್ದರು. ಮುಂಬೈ ಸರಣಿ ಸ್ಫೋಟಗಳು ಎಂದಿಗೂ ಸಂಭವಿಸುತ್ತಿರಲಿಲ್ಲ ಎಂದು ನಿಕಮ್ ಹೇಳಿದ್ದಾರೆ.
ಅವರು ಪೊಲೀಸರಿಗೆ ಮಾಹಿತಿ ನೀಡದಿರುವುದು ಹಲವು ಜನರನ್ನು ಬಲಿತೆಗೆದುಕೊಂಡ ಸ್ಫೋಟಗಳಿಗೆ ಕಾರಣವಾಯಿತು. ಇನ್ನು ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಸಂಜಯ್ ದತ್‌ಗೆ ಶಿಕ್ಷೆ ಪ್ರಕಟಗೊಂಡಾಗ ಅವರು ಸಂಪೂರ್ಣವಾಗಿ ನಿಯಂತ್ರಣ ಕಳೆದುಕೊಂಡಿದ್ದರು. ಆಗ ನಾನು ಅವರಿಗೆ ಹೇಳಿದ್ದೆ, ಸಂಜಯ್ ಹೀಗೆ ಮಾಡಬೇಡಿ. ಮಾಧ್ಯಮಗಳು ನಿನ್ನನ್ನು ಗಮನಿಸುತ್ತಿವೆ. ನೀನು ಒಬ್ಬ ನಟ. ಶಿಕ್ಷೆಯಿಂದ ನೀನು ಭಯಭೀತನಾಗಿ ಕಂಡರೆ, ಜನ ನಿನ್ನನ್ನು ತಪ್ಪಿತಸ್ಥನೆಂದು ಪರಿಗಣಿಸುತ್ತಾರೆ. ನಿನಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದು ಹೇಳಿದೆ. ಅವನು ‘ಹೌದು ಸರ್, ಹೌದು ಸರ್’ ಎಂದಿದ್ದರು ಎಂದು ನಿಕಮ್ ಅಂದಿನ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ.
1993ರಲ್ಲಿ ಮುಂಬೈನಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣ 2003ರಲ್ಲಿ ಗೇಟ್‌ವೇ ಆಫ್ ಇಂಡಿಯಾ ಬಳಿ ಬಾಂಬ್ ಸ್ಫೋಟ ಪ್ರಕರಣದಲ್ಲಿಯೂ ನಿಕಮ್ ವಾದ ಮಂಡಿಸಿದ್ದರು.