ಆಡಳಿತ ಪಕ್ಷದ ಸದಸ್ಯರಿಗೇ ಇಂಥ ದುರ್ಗತಿ ಬಂದರೆ ಇತರೆ ಪಕ್ಷಗಳ ಶಾಸಕರ ಪರಿಸ್ಥಿತಿ ಏನು?: ಎಚ್.ಡಿ.ಕುಮಾರಸ್ವಾಮಿ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಕಾಂಗ್ರೆಸ್‌ ಸರಕಾರದ ದರ್ಬಾರಿನಲ್ಲಿ ಶಾಸಕರ ಪರಿಸ್ಥಿತಿ ತಬರನ ಕಥೆಯಂತೆ ಆಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿಯ ತಮ್ಮ ಅಧಿಕೃತ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವರು, ಶಾಸಕರು ಅನುದಾನಕ್ಕಾಗಿ, ಸರಕಾರದ ಯೋಜನೆಗಳಿಗಾಗಿ ಕಚೇರಿಗಳ ಸುತ್ತ, ಮಂತ್ರಿಮಹೋದಯರ ಸುತ್ತ ತಬರನಂತೆ ಸುತ್ತುತ್ತಿದ್ದಾರೆ. ಆಡಳಿತ ಪಕ್ಷದ ಸದಸ್ಯರಿಗೇ ಇಂಥ ದುರ್ಗತಿ ಬಂದರೆ ಇತರೆ ಪಕ್ಷಗಳ ಶಾಸಕರ ಪರಿಸ್ಥಿತಿ ಏನು? ಎಂದು ಪ್ರಶ್ನಿಸಿದರು.

ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಬರೆದಿದ್ದ ʼತಬರನ ಕಥೆʼ ಎಂಬ ಕಥೆಯನ್ನು ಗಿರೀಶ್‌ ಕಾಸರವಳ್ಳಿ ಅವರು ಸಿನಿಮಾ ಮಾಡಿದ್ದರು. ವಾಚ್‌ ಮನ್‌ ಒಬ್ಬ ತನ್ನ ಪಿಂಚಣಿಗಾಗಿ ಸರಕಾರಿ ಕಚೇರಿಗಳಿಗೆ ಅಲೆ ಅಲೆದು ಬಸವಳಿಯುವ ಕಥೆ ಅದು. ಅಂಥದ್ದೇ ಪರಿಸ್ಥಿತಿ ರಾಜ್ಯದ ಶಾಸಕರಿಗೂ ಬಂದಿರುವುದು ದುರದೃಷ್ಟಕರ. ಶಾಸಕರು ಯೋಜನೆಗಳಾಗಿ ಮಂತ್ರಿಗಳು, ಎಂಜಿನಿಯರ್‌ಗಳ ಕಚೇರಿಗಳ ಸುತ್ತ ತಬರನಂತೆ ಸುತ್ತುತ್ತಿದ್ದಾರೆ. ರಾಜ್ಯದಲ್ಲಿ ಇಂಥ ದುಸ್ಥಿತಿ ಹಿಂದೆಂದೂ ಇರಲಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಪಕ್ಷದ ಹಿರಿಯ ಶಾಸಕರು, ಅದರಲ್ಲಿಯೂ ಯೋಜನಾ ಆಯೋಗ ಉಪಾಧ್ಯಕ್ಷ ಬಿ.ಆರ್.‌ಪಾಟೀಲ್‌, ರಾಜು ಕಾಗೆ, ಬೇಳೂರು ಗೋಪಾಲಕೃಷ್ಣ ಅಂಥವರೇ ಹೇಳುತ್ತಿದ್ದಾರೆ. ಅವರೇ ಈ ಸರಕಾರಕ್ಕೆ ಸರ್ಟಿಫಿಕೇಟ್‌ ನೀಡಿದ್ದಾರೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ವಸತಿ ಇಲಾಖೆಯದ್ದೇ ಪುರಾಣ. ಜನತೆ ಕಣ್ಣಿಗೆ ಮಂಕುಬೂದಿ ಎರಚುವ ಕೆಲಸ ಮಾಡಲಾಗುತ್ತಿದೆ. ಸರಕಾರಕ್ಕೆ ಜನರ ಭಯ ಭಕ್ತಿ ಇಲ್ಲದಾಗಿದೆ.

ಬಿ.ಆರ್.ಪಾಟೀಲ್ ಅವರು ಶಾಸಕರಷ್ಟೇ ಅಲ್ಲ, ಅವರ ಶಾಸಕರಾದಾಗ ನಾವು ಯಾರೂ ಇನ್ನೂ ರಾಜಕರಣಕ್ಕೇ ಬಂದಿರಲಿಲ್ಲ. ಹಿರಿಯ ವ್ಯಕ್ತಿ. ಅವರ ಹಿನ್ನೆಲೆಯನ್ನು ನೋಡಿದ್ದೇವೆ. ದೊಡ್ಡ ಅನುಭವುಳ್ಳ ನಾಯಕರು. ಅಂಥವರ ಕ್ಷೇತ್ರದಲ್ಲಿ 950 ಮನೆಗಳನ್ನು ಶಾಸಕರ ಗಮನಕ್ಕೆ ಬಾರದಂತೆ ವಸತಿ ಇಲಾಖೆಯಿಂದ ನೀಡಿದ್ದಾರೆ! ಪಾಟೀಲ್‌ ಅವರು ಸಚಿವರ ಆಪ್ತ ಕಾರ್ಯದರ್ಶಿಗೆ ಮೊಬೈಲ್‌ ಕರೆ ಮೂಲಕ ಪ್ರಶ್ನೆ ಮಾಡಿದರೆ, ಅವರು ಏನು ಉತ್ತರ ನೀಡಿದ್ದಾರೆ ಎಂಬುದು ಆಡಿಯೋ ಮೂಲಕ ವೈರಲ್‌ ಆಗಿದೆ. ನಿಖರವಾದ ಪ್ರಕರಣ ಇದ್ದರೆ ದೂರು ಕೊಡಿ, ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಶಾಸಕರಿಗೆ ಉತ್ತರ ಕೊಡುತ್ತಾರೆ. ಆ ವ್ಯಕ್ತಿಗೆ ಕ್ರಮ ತೆಗೆದುಕೊಳ್ಳುವ ಅಧಿಕಾರ ಕೊಟ್ಟಿದ್ದಾರಾ ಸಚಿವರು? ವಸೂಲಿ ಮಾಡುವ ಪವರ್ ಕೊಟ್ಟಿದ್ದಾರಷ್ಟೇ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಎನ್ನುವವರು ಇದ್ದಾರಾ? ಸರಕಾರ ಎನ್ನುವುದು ಇದೆಯಾ? ಡಿಸಿಎಂ ನೋಡಿದರೆ ವಿಷಯ ತಿಳಿದುಕೊಂಡು ಹೇಳುತ್ತೇನೆ ಎಂದು ಕದ್ದು ಓಡುತ್ತಾರೆ. ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಕೊಟ್ಟಿರುವ ಭರವಸೆ ಈಡೇರಿಲ್ಲ. ವಿರೋಧ ಪಕ್ಷಗಳು ಅಸೂಯೆಯಿಂದ ಮಾತಾಡುತ್ತಿಲ್ಲ. ಸಿಎಂ ಅವರೇ, ನಿಮ್ಮ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ. ನಿಮ್ಮ ಶಾಸಕರಿಗೆ ತಬರನ ಪರಿಸ್ಥಿತಿ ಬಂದಿದೆ. ಶಾಸಕರು ತಮ್ಮ ಕ್ಷೇತ್ರಗಳಿಗೆ ಅನುದಾನ ಕೇಳುತ್ತಿದ್ದಾರೆ. ಆದರೆ, ಕಮೀಷನ್ ಕೊಟ್ಟವರಿಗೆ ಮಾತ್ರ ಅನುದಾನ ಸಿಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸಚಿವರು ರಾಜೀನಾಮೆ ನೀಡಲಿ, ಅಕ್ರಮಗಳ ತನಿಖೆ ಆಗಲಿ ಎಂದು ಒತ್ತಾಯಿಸಿದ್ದಾರೆ. ನಿಮ್ಮ ಪಕ್ಷದ ಶಾಸಕರೇ ನಿಮ್ಮ ಮುಖಕ್ಕೆ ಮಂಗಳಾರತಿ ಎತ್ತುತ್ತಿದ್ದಾರೆ. ನಿಮ್ಮ ಶಾಸಕರ ಪರಿಸ್ಥಿತಿಯೇ ಹೀಗಾದರೆ ಜೆಡಿಎಸ್‌, ಬಿಜೆಪಿ ಶಾಸಕರ ಪರಿಸ್ಥಿತಿ ಏನು? ಅನುದಾನಕ್ಕಾಗಿ ಶಾಸಕರು ಅಲೆಯುತ್ತಿದ್ದಾರೆ. ಯಾರೋ‌ ಮಧ್ಯದಲ್ಲಿ ನಿಂತಿದ್ದಾರೋ ಅವರು ಕಲೆಕ್ಷನ್ ಮಾಡುತ್ತಿದ್ದಾರೆ. ಶಾಸಕರು ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವರು ವಾಗ್ದಾಳಿ ನಡೆಸಿದರು.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!